ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ವಿಶ್ವಾಸಮತಯಾಚನೆ ವೇಳೆ ಸರ್ಕಾರದ ಪರವಾಗಿ ಮತ ಹಾಕಿದ ಎಐಎಡಿಎಂಕೆಯ ಶಾಸಕರನ್ನು ಪಕ್ಷದ ಎಲ್ಲ ಹುದ್ದೆಗಳಿಂದ ತೆಗೆದು ಹಾಕಲಾಗಿದೆ.
47 ಶಾಸಕರ ಪೈಕಿ 25 ಮಂದಿ ಸರ್ಕಾರದ ಪರವಾಗಿ ಮತ ಹಾಕಿದ್ದರು.
ಈ ಹಿನ್ನೆಲೆಯಲ್ಲಿ ವಿಜಯ್ ಅವರಿಗೆ 144 ಮತಗಳ ಪ್ರಚಂಡ ಬೆಂಬಲ ಸಿಕ್ಕಿತ್ತು.
ಈ ಸಂಬಂಧ ನಥಮ್ ಆರ್ ವಿಶ್ವನಾಥ್ ಸೇರಿದಂತೆ 25 ಶಾಸಕರ ವಿರುದ್ಧ ಕ್ರಮ ಕೈಗೊಂಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಇ. ಪಳನಿಸ್ವಾಮಿ, ಅವರ ಜಾಗದಲ್ಲಿ ಹೊಸ ಜಿಲ್ಲಾ ಕಾರ್ಯದರ್ಶಿಗಳನ್ನು ನೇಮಕ ಮಾಡಿದ್ದಾರೆ.
47 ಶಾಸಕರ ಪೈಕಿ 25 ಶಾಸಕರು ಮತ ಚಲಾಯಿಸಿರುವುದನ್ನು ಪಕ್ಷಾಂತರ ವಿರೋಧಿ ಕಾನೂನು ಅನ್ವಯವಾಗಲಿದೆಯೇ ಎಂಬ ಪ್ರಶ್ನೆ ಎದ್ದಿದೆ.
ಪಕ್ಷದ ಸೂಚನೆ, ವಿಪ್ ಮೀರಿ ಮತ ಹಾಕುವುದು, ಯಾವುದೇ ಮಾಹಿತಿ ನೀಡದೇ ರಾಜೀನಾಮೆ ನೀಡುವವರ ಮೇಲೆ ಪಕ್ಷ ವಿರೋಧಿ ಕಾಯ್ದೆಯಡಿ ಕ್ರಮ ಜರುಗಿಸಬಹುದಾಗಿದೆ. ಆದರೆ, ಮೂರನೇ ಎರಡರಷ್ಟು ಶಾಸಕರು ಬೇರೊಂದು ಪಕ್ಷದ ಜೊತೆ ವಿಲೀನಗೊಂಡಾಗ ಈ ಕಾನೂನು ಅನ್ವಯವಾಗುವುದಿಲ್ಲ.

