ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ನಡೆದ ನೂತನ ಶಾಸಕರ ಪ್ರಮಾಣವಚನ ಸ್ವೀಕಾರ ಸಮಾರಂಭವು ಹಿಂದೆಂದೂ ಕಂಡಿರದ ಸನ್ನಿವೇಶಗಳಿಗೆ ಬುಧವಾರ ಸಾಕ್ಷಿಯಾಗಿತ್ತು.
ವಿಧಾನಸಭೆಯಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗಿತ್ತು. ಬಳಿಕ ಶಾಸಕರಿಗಾಗಿ ರಾಜ್ಯ ಸರ್ಕಾರಿ ಪ್ರಾಯೋಜಿತ ಮೀನು ಊಟವನ್ನು ಆಯೋಜಿಸಲಾಗಿತ್ತು.
ಚುನಾವಣೆಗೂ ಮುನ್ನ ವಿರೋಧ ಪಕ್ಷಗಳು, 'ಬಿಜೆಪಿ ಅಧಿಕಾರಕ್ಕೆ ಬಂದರೆ ಜನರ ಮಾಂಸಾಹಾರ ಅಭ್ಯಾಸಕ್ಕೆ ಅಡ್ಡಿಪಡಿಸಲಿದೆ' ಎಂದು ಆರೋಪ ಮಾಡಿದ್ದವು. ಮೀನಿನ ಖಾದ್ಯಗಳ ಸೇವನೆಯನ್ನು ನಿರ್ಬಂಧಿಸಬಹುದು ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದವು. ವಿಧಾನಸಭೆಯಲ್ಲಿಯೇ ಮೀನು ಊಟ ಹಾಕಿಸುವ ಮೂಲಕ ವಿಪಕ್ಷಗಳ ಈ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ.
ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದ ಸುವೇಂದು ಅಧಿಕಾರಿ ಅವರಿಗೆ ಕೆಂಪುಹಾಸಿನ ಸ್ವಾಗತ ನೀಡಲಾಗಿತ್ತು.
ಸುವೇಂದು ಅಧಿಕಾರಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ನಮಿಸಿದರು. ಬಳಿಕ ವಿಧಾನಸಭೆ ಪ್ರವೇಶಕ್ಕೂ ಮುನ್ನ ಕಟ್ಟಡದ ಮೆಟ್ಟಿಲುಗಳಿಗೆ ತಲೆಬಾಗಿ ನಮಸ್ಕರಿಸಿದರು.
ಬಳಿಕ ಅವರು ತಾವೇ ಗಂಟೆ ಬಾರಿಸುತ್ತಾ ತಮ್ಮ ಕೊಠಡಿಗೆ ಪೂಜೆ ಸಲ್ಲಿಸಿದರು. ಶಂಖದ ನಾದ ಇಡೀ ವಿಧಾನಸಭೆಯಲ್ಲಿ ಮೊಳಗಿತ್ತು. ರಾಜ್ಯ ಶಾಸಕಾಂಗದ ಇತಿಹಾಸದಲ್ಲಿ ಮುಖ್ಯಮಂತ್ರಿಯೊಬ್ಬರು ತಮ್ಮ ಕೊಠಡಿಗೆ ತಾವೇ ಪೂಜೆ ಸಲ್ಲಿಸಿದ್ದು ಇದೇ ಮೊದಲು.
ಬಳಿಕ ಮಾತನಾಡಿದ ಸುವೇಂದು ಅಧಿಕಾರಿ ಅವರು,'ವಿಧಾನಸಭೆಯು ಪ್ರಜಾಪ್ರಭುತ್ವದ ದೇಗುಲ. ಇಲ್ಲಿ ನಾವು ಜನರಿಗಾಗಿ ಪಾರದರ್ಶಕವಾಗಿ ಕೆಲಸ ಮಾಡುತ್ತೇವೆ' ಎಂದು ಹೇಳಿದರು.
ದಿನದ ಅರ್ಧ ಕಲಾಪವು ಮುಗಿಯುತ್ತಿದ್ದಂತೆಯೇ ಹಂಗಾಮಿ ಸ್ಪೀಕರ್ ತಪಸ್ ರಾಯ್ ಅವರು ಎದ್ದುನಿಂತು, 'ನೂತನ ಶಾಸಕರಿಗೆ ಮೀನೂಟ ಕಾಯುತ್ತಿದೆ' ಎಂದು ಘೋಷಿಸಿದರು.

