ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ರದ್ದಾಗಿರುವ ಹಾಗೂ ಮರು ಪರೀಕ್ಷೆ ನಡೆಯಲಿರುವ ನೀಟ್-ಯುಜಿ 2026ರ ಅಭ್ಯರ್ಥಿಗಳ ಶುಲ್ಕ ಮರುಪಾವತಿಗಾಗಿ ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸುವ ಗಡುವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಜೂನ್ 22ರವರೆಗೆ ವಿಸ್ತರಿಸಿದೆ.
ಜೂನ್ 21ರಂದು ನಡೆಯಲಿರುವ ಮರು ಪರೀಕ್ಷೆಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ ಎಂದು ಎನ್‌ಟಿಎ ಸ್ಪಷ್ಟಪಡಿಸಿತ್ತು. ವಿದ್ಯಾರ್ಥಿಗಳು ಈಗಾಗಲೇ ಪಾವತಿಸಿರುವ ಶುಲ್ಕವನ್ನು ಮರುಪಾವತಿ ಮಾಡುವುದಾಗಿ ಹೇಳಿತ್ತು.
ಈವರೆಗೆ 13 ಲಕ್ಷ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸಿದ್ದಾರೆ. ವಿವರಗಳನ್ನು ಸಲ್ಲಿಸದ ಅಭ್ಯರ್ಥಿಗಳಿಗೂ ಅನುಕೂಲವಾಗಲು ಅವಧಿ ವಿಸ್ತರಿಸಲಾಗಿದೆ ಎಂದು ಎನ್‌ಟಿಎ ತಿಳಿಸಿದೆ.
ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಮೇ 3ರಂದು ನಡೆದಿದ್ದ ನೀಟ್-ಯುಜಿ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಕಾರಣ ಎನ್‌ಟಿಎ ರದ್ದುಗೊಳಿಸಿತ್ತು. ಈ ಸಂಬಂಧ ಸಿಬಿಐ ತನಿಖೆ ನಡೆಸುತ್ತಿದೆ. ಸುಮಾರು 23 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಜೂನ್ 21ರಂದು ಮರು ಪರೀಕ್ಷೆ ನಡೆಯಲಿದೆ.

