ತಿರುವನಂತಪುರಂ: ರಾಜ್ಯದ ಸುಮಾರು 62 ಲಕ್ಷ ಫಲಾನುಭವಿಗಳಿಗೆ ಈ ತಿಂಗಳ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿ ಮಂಡಳಿಯ ಪಿಂಚಣಿ ವಿತರಣೆ ಮೇ 25 ರಿಂದ ಪ್ರಾರಂಭವಾಗಲಿದೆ.
ಪಿಂಚಣಿ ವಿತರಣೆಗೆ 1070 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುವರು.
ಪ್ರಸ್ತುತ, ರಾಜ್ಯದಲ್ಲಿ ಕಲ್ಯಾಣ ಪಿಂಚಣಿ ಮೊತ್ತ 2000 ರೂ.ಗಳಾಗಿದ್ದು, ಯುಡಿಎಫ್ ಚುನಾವಣಾ ಪ್ರಣಾಳಿಕೆಯಲ್ಲಿನ ಪ್ರಮುಖ ಭರವಸೆಗಳಲ್ಲಿ ಒಂದಾದ ಕಲ್ಯಾಣ ಪಿಂಚಣಿ ಮೊತ್ತವನ್ನು ಹಂತ ಹಂತವಾಗಿ 3000 ರೂ.ಗಳಿಗೆ ಹೆಚ್ಚಿಸುವುದಾಗಿತ್ತು. ಮೊದಲ ಹಂತವಾಗಿ, ಹೊಸ ಸರ್ಕಾರವು ಫಲಾನುಭವಿಗಳಿಗೆ ಪ್ರಸ್ತುತ ಮಾಸಿಕ ವಿತರಣೆಯನ್ನು ಅಡೆತಡೆಯಿಲ್ಲದೆ ತಲುಪಲು ಆದ್ಯತೆ ನೀಡುತ್ತಿದೆ.
2011-2016ರ ಅವಧಿಯಲ್ಲಿ ಉಮ್ಮನ್ ಚಾಂಡಿ ಸರ್ಕಾರದ ಅವಧಿಯಲ್ಲಿ 600 ರೂ.ಗಳಾಗಿದ್ದ ಪಿಂಚಣಿ ಮೊತ್ತವನ್ನು ಮೊದಲ ಮತ್ತು ಎರಡನೇ ಪಿಣರಾಯಿ ವಿಜಯನ್ ಸರ್ಕಾರಗಳು ಹಂತ ಹಂತವಾಗಿ 2,000 ರೂ.ಗಳಿಗೆ ಹೆಚ್ಚಿಸಿತ್ತು. ಹೊಸ ಆಡಳಿತದಲ್ಲಿಯೂ ವಿತರಣೆಗಾಗಿ ಈ ಮೊತ್ತವನ್ನು ಮೀಸಲಿಡಲಾಗಿದೆ.

