ವಾಷಿಂಗ್ಟನ್: ಅಮೆರಿಕದ ಹೊಂಡುರಾಸ್ ಕರಾವಳಿಯಲ್ಲಿ ಬಂದೂಕುಧಾರಿಗಳು ನಡೆಸಿದ ಎರಡು ಪ್ರತ್ಯೇಕ ಗುಂಡಿನ ದಾಳಿಗಳನ್ನು ನಡೆಸಿದ್ದು, ಆರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 25 ಜನರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಹೊಂಡುರಾಸ್‌ನ ಟ್ರುಜಿಲ್ಲೊನಲ್ಲಿ ಮೊದಲ ದಾಳಿ ನಡೆದಿದ್ದು, ಕನಿಷ್ಠ 19 ಕಾರ್ಮಿಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ವಕ್ತಾರ ಎಡ್ಗಾರ್ಡೊ ಬರಹೋನಾ ಹೇಳಿದ್ದಾರೆ.
ಗ್ವಾಟೆಮಾಲಾ ಗಡಿಯ ಸಮೀಪವಿರುವ ಕೊರ್ಟೆಸ್ ವಿಭಾಗದ ಒಮೊವಾ ಪ್ರದೇಶದಲ್ಲಿ ಬಂದೂಕುಧಾರಿಗಳು ಮತ್ತೊಂದು ಗುಂಡಿನ ದಾಳಿ ನಡೆಸಿದ್ದು, ಒಬ್ಬ ಹಿರಿಯ ಅಧಿಕಾರಿ ಸೇರಿದಂತೆ ಆರು ಪೊಲೀಸರನ್ನು ಹತ್ಯೆ ಮಾಡಲಾಗಿದೆ.
ಹತ್ಯೆಗೀಡಾದ ಪೊಲೀಸರನ್ನು ವಿಶೇಷ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ರಾಜಧಾನಿ ತೆಗುಸಿಗಾಲ್ಪಾದಿಂದ ಒಮೊವಾಗೆ ಪ್ರಯಾಣಿಸುತ್ತಿದ್ದ ವೇಳೆ ಅವರ ಮೇಲೆ ದಾಳಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪರಿಸರವಾದಿಗಳ ಮೇಲೆ ದಾಳಿ...
ಟ್ರುಜಿಲ್ಲೊ ಪ್ರಕೃತಿ ಸಂಪನ್ಮೂಲ ಭರಿತವಾದ ಪ್ರದೇಶವಾಗಿದ್ದು, ದಶಕಗಳಿಂದ ಕೃಷಿ ಭೂಮಿ ಸಂಘರ್ಷದ ತಾಣವಾಗಿದೆ.
ಪರಿಸರ ಮತ್ತು ಭೂಮಿ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿರುವ ಕಾರಣಕ್ಕೆ ಬೆದರಿಕೆ ಮತ್ತು ದೌರ್ಜನ್ಯ ಎದುರಿಸುತ್ತಿರುವ ಕಾರ್ಯಕರ್ತರಿಗೆ ಮಾನವ ಹಕ್ಕುಗಳ ಆಯೋಗವು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಿತ್ತು.
ಗ್ಲೋಬಲ್ ವಿಟ್ನೆಸ್ ಎಂಬ ಸರ್ಕಾರೇತರ ಸಂಸ್ಥೆಯ ಪ್ರಕಾರ, ಪರಿಸರವಾದಿಗಳಿಗೆ ಅತ್ಯಂತ ಅಪಾಯಕಾರಿ ದೇಶಗಳ ಪೈಕಿ ಮಧ್ಯೆ ಅಮೆರಿಕದ ಹೊಂಡುರಾಸ್ ಕೂಡಾ ಒಂದಾಗಿದೆ. 2024ರಲ್ಲಿ 5 ಮತ್ತು 2023ರಲ್ಲಿ 18 ಪರಿಸರವಾದಿಗಳನ್ನು ಹತ್ಯೆ ಮಾಡಲಾಗಿತ್ತು.
ದಾಳಿ ನಡೆದ ಎರಡೂ ಪ್ರದೇಶಗಳಿಗೆ ಪೊಲೀಸರು, ಸಶಸ್ತ್ರ ಪಡೆಗಳು ಸೇರಿದಂತೆ ವಿಧಿವಿಜ್ಞಾನ ತಜ್ಞರ ತಂಡವು ಭೇಟಿ ನೀಡಿದೆ ಎಂದು ಭದ್ರತಾ ಸಚಿವಾಲಯ ತಿಳಿಸಿದೆ.

