ದುಬೈ: ಇರಾನ್‌ನಲ್ಲಿರುವ ಅಣ್ವಸ್ತ್ರ ತಯಾರಿಕೆಗೆ ಸಿದ್ಧವಿರುವ ಸಮೃದ್ಧೀಕರಿಸಿದ ಯುರೇನಿಯಂ ಅನ್ನು ವಿದೇಶಗಳಿಗೆ ಕಳುಹಿಸಬಾರದು ಎಂದು ಪರಮೋಚ್ಚ ನಾಯಕ ಆಯತೊಲ್ಲಾ ಮೊಜ್ತಬಾ ಖಮೇನಿ ಆದೇಶಿಸಿದ್ದಾರೆ.
'ಯುರೇನಿಯಂ ಅನ್ನು ವಿದೇಶಕ್ಕೆ ಕಳುಹಿಸುವುದರಿಂದ ದೇಶವು ಭವಿಷ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್‌ನ ದಾಳಿಗಳಿಗೆ ಹೆಚ್ಚಾಗಿ ತುತ್ತಾಗಬಹುದು ಎಂಬ ಆತಂಕವನ್ನು ಖಮೇನಿ ವ್ಯಕ್ತಪಡಿಸಿದ್ದಾರೆ' ಎಂದು ಇರಾನ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಸಮೃದ್ಧೀಕರಿಸಿದ ಯುರೇನಿಯಂ ಅನ್ನು ಇರಾನ್ ತನ್ನ ಬಳಿ ಇರಿಸಿಕೊಳ್ಳ ಬಾರದು ಎನ್ನುವುದು ಅಮೆರಿಕದ ಪ್ರಮುಖ ಬೇಡಿಕೆಯಾಗಿದೆ. ಆದರೆ, ಇರಾನ್ ಈಗ ತನ್ನ ನಿಲುವನ್ನು ಮತ್ತಷ್ಟು ಕಠಿಣಗೊಳಿಸಿದೆ. ಮೊಜ್ತಬಾ ಖಮೇನಿ ಅವರ ಈ ಆದೇಶವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮತ್ತಷ್ಟು ನಿರಾಸೆಗೊಳಿಸಬಹುದು. ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧವನ್ನು ಕೊನೆಗೊಳಿಸುವ ಮಾತುಕತೆಗಳನ್ನು ಸಂಕೀರ್ಣಗೊಳಿಸುವ ಸಾಧ್ಯತೆ ಇದೆ.
'ಇರಾನ್ ಅಣ್ವಸ್ತ್ರ ತಯಾರಿಸಲು ಅಗತ್ಯವಿರುವ ಹಾಗೂ ಗರಿಷ್ಠ ಪ್ರಮಾಣದಲ್ಲಿ ಸಮೃದ್ಧೀಕ ರಿಸಿದ ದಾಸ್ತಾನು ಇರಿಸಿರುವ ಯುರೇನಿಯಂ ಅನ್ನು ಆ ದೇಶದಿಂದ ಹೊರಗೆ ಸಾಗಿಸಲಾಗುವುದು. ಯಾವುದೇ ಶಾಂತಿ ಒಪ್ಪಂದದಲ್ಲಿ ಈ ಅಂಶವನ್ನು ಕಡ್ಡಾಯವಾಗಿ ಸೇರಿಸಲಾಗುವುದು ಎಂದು ಟ್ರಂಪ್ ಅವರು ಇಸ್ರೇಲ್‌ಗೆ ಭರವಸೆ ನೀಡಿದ್ದಾರೆ' ಎಂಬುದಾಗಿ ಇಸ್ರೇಲ್‌ನ ಅಧಿಕಾರಿಗಳು ತಿಳಿಸಿದ್ದಾರೆ.
'ಇರಾನ್‌ನಿಂದ ಸಮೃದ್ಧೀಕರಿಸಿದಯುರೇನಿಯಂ ಅನ್ನು ಹೊರಗೆ ಸಾಗಿಸುವವರೆಗೆ, ಅದು ತನ್ನ ಬಂಡುಕೋರ ಗುಂಪುಗಳಿಗೆ ನೀಡುವ ಬೆಂಬಲವನ್ನು ನಿಲ್ಲಿಸುವವರೆಗೆ ಮತ್ತು ಅದರ ಬ್ಯಾಲಿಸ್ಟಿಕ್ ಕ್ಷಿಪಣಿ ಸಾಮರ್ಥ್ಯ ಕಡಿಮೆಯಾಗುವವರೆಗೆ ಯುದ್ಧವು ಕೊನೆಗೊಂಡಿದೆ ಎಂದು ನಾವು ಪರಿಗಣಿಸುವುದಿಲ್ಲ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

