ಪರಾಗ್ವೆ: ಹೊರ್ಮುಜ್ ಜಲಸಂಧಿಯನ್ನು ತೆರೆಯುವ ಸಂಬಂಧ ಇರಾನ್ ಹಾಗೂ ಅಮೆರಿಕ ನಡುವೆ ಒಪ್ಪಂದ ನಡೆಯುವ ಸಾಧ್ಯತೆ 50-50 ಮಾತ್ರ ಎಂದು ಯುಎಇ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಮಾತುಕತೆ ವೇಳೆ ಹೆಚ್ಚಿನ ಬೇಡಿಕೆ ಇಡಬಾರದು ಎಂದು ಇರಾನ್ ಸರ್ಕಾರವನ್ನು ಯುಎಇ ಅಧ್ಯಕ್ಷರ ಸಲಹೆಗಾರ ಅನ್ವರ್ ಗರ್ಗಾಶ್ ಕೋರಿದ್ದಾರೆ.
ಹೆಚ್ಚಿನ ಬೇಡಿಕೆಯಿಂದಾಗಿ ಈ ಹಿಂದೆ ಹಲವು ಅವಕಾಶಗಳನ್ನು ಇರಾನ್ ಅಧಿಕಾರಿಗಳು ಕಳೆದುಕೊಂಡಿದ್ದಾರೆ ಎಂದು ಪರಾಗ್ವೆಯಲ್ಲಿ ನಡೆದ ಸಮಾವೇಶವೊಂದರಲ್ಲಿ ಗರ್ಗಾಶ್ ಹೇಳಿದ್ದಾರೆ.
ಈ ಬಾರಿ ಅದು ಆಗುವುದಿಲ್ಲ ಎನ್ನುವ ಆಶಾಭಾವನೆ ಇದೆ ಎಂದು ಹೇಳಿದ್ದಾರೆ.
ಹೊರ್ಮುಜ್ ಜಲಸಂಧಿಯಿಂದಾಗಿರುವ ಸಮಸ್ಯೆ ಬಗೆಹರಿಯಬೇಕು ಎಂದು ಹೇಳಿದ ಅವರು, ಸದ್ಯ ಇರುವ ತಾತ್ಕಾಲಿಕ ಕದನ ವಿರಾಮದ ಅನಿಶ್ಚಿತತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಮಾತುಕತೆಗಳು ಕದನವಿರಾಮಕ್ಕೆ ಅಡಿಪಾಯ ಹಾಕಬೇಕು. ಮುಂದಿನ ಕಲಹಕ್ಕೆ ಬೀಜ ಹಾಕಬಾರದು ಎಂದು ಅವರು ಹೇಳಿದ್ದಾರೆ.

