ದುಬೈ/ವಾಷಿಂಗ್ಟನ್: ಅಮೆರಿಕಕ್ಕೆ ಇರಾನ್ ಇತ್ತೀಚೆಗೆ ಸಲ್ಲಿಸಿರುವ ಪ್ರಸ್ತಾವವು, ಉಭಯ ದೇಶಗಳ ನಡುವಿನ ಕದನ ವಿರಾಮವನ್ನು ವಿಸ್ತರಿಸುವ ಬದಲು ಯುದ್ಧವನ್ನು ಸಂಪೂರ್ಣವಾಗಿ ಕೊನೆಗೊಳಿಸುವ ಹಾಗೂ ಈ ಸಮಸ್ಯೆಗಳನ್ನು 30 ದಿನಗಳಲ್ಲಿ ಪರಿಹರಿಸುವ ಗುರಿಯನ್ನು ಹೊಂದಿದೆ.
ಅಮೆರಿಕದ ಒಂಬತ್ತು ಅಂಶಗಳ ಯೋಜನೆಗೆ ಪ್ರತಿಯಾಗಿ ಸಲ್ಲಿಸಿರುವ 14 ಅಂಶಗಳ ಪ್ರಸ್ತಾವದಲ್ಲಿ ಕದನ ವಿರಾಮವನ್ನು ವಿಸ್ತರಿಸುವ ಬದಲು ಯುದ್ಧವನ್ನೇ ನಿಲ್ಲಿಸಬೇಕು. ಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಅಮೆರಿಕ ಹಿಂಪಡೆಯಬೇಕು. ಬಂದರುಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಬೇಕು. ಈ ಪ್ರದೇಶದಿಂದ ಅಮೆರಿಕ ತನ್ನ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು. ಲೆಬನಾನ್ನಲ್ಲಿ ಇಸ್ರೇಲ್ ನಡೆಸುತ್ತಿರುವ ಕಾರ್ಯಾಚರಣೆ ಸೇರಿದಂತೆ ಎಲ್ಲ ದಾಳಿಗಳನ್ನು ನಿಲ್ಲಿಸಬೇಕು ಎಂಬ ಅಂಶಗಳನ್ನು ಇರಾನ್ ಪ್ರಸ್ತಾಪಿಸಿದೆ ಎಂದು ಇರಾನ್ನ 'ನೂರ್' ನ್ಯೂಸ್ ಏಜೆನ್ಸಿ ಹಾಗೂ ಅಮೆರಿಕದ 'ಆಕ್ಸಿಯೋಸ್' ಸುದ್ದಿ ಸಂಸ್ಥೆ ವರದಿ ಮಾಡಿವೆ.
'ಅಮೆರಿಕದ ದಿಗ್ಬಂಧನ ವಿಫಲ':
'ಹೊರ್ಮುಜ್ ಜಲಸಂಧಿಯ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ. ಅದು ಯುದ್ಧಪೂರ್ವ ಪರಿಸ್ಥಿತಿಗೆ ಮರಳುವುದಿಲ್ಲ' ಎಂದು ಇರಾನ್ ಸಂಸತ್ನ ಉಪ ಸಭಾಧ್ಯಕ್ಷ ಅಲಿ ನಿಕ್ಜಾದ್ ತಿಳಿಸಿದ್ದಾರೆ.
ಹೊರ್ಮುಜ್ ಜಲಸಂಧಿಯ ಅತ್ಯಂತ ಕಿರಿದಾದ ಭಾಗಕ್ಕೆ ಸಮೀಪವಿರುವ ಲಾರಕ್ ದ್ವೀಪದ ಬಂದರಿಗೆ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
'ಹೊರ್ಮುಜ್ ಜಲಸಂಧಿಯು ಇರಾನ್ಗೆ ಸೇರಿದೆ. ಯುದ್ಧದ ಸಮಯದಲ್ಲಿ ಹಾನಿಗೊಳಗಾದ ಆಸ್ತಿಗಳಿಗೆ ಪರಿಹಾರ ಒದಗಿಸಲು ದೇಶವು ಶ್ರಮಿಸುತ್ತಿದೆ. ಟ್ರಂಪ್ ಅವರ ದಿಗ್ಬಂಧನವು ವಿಫಲವಾಗಲಿದೆ' ಎಂದು ಹೇಳಿದ್ದಾರೆ.
'ಅಮೆರಿಕ ಅಥವಾ ಇಸ್ರೇಲ್ಗೆ ಸಂಬಂಧವಿಲ್ಲದ ಯಾವುದೇ ಹಡಗು ಶುಲ್ಕ ಪಾವತಿಸಿದ ನಂತರವೇ ಹಾದುಹೋಗಲು ಅವಕಾಶ ನೀಡಲಾಗುತ್ತದೆ' ಎಂದು ತಿಳಿಸಿದ್ದಾರೆ.
ಅರಾಘ್ಚಿ- ಬುಸೈದಿ ಚರ್ಚೆ:
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಒಮಾನ್ ವಿದೇಶಾಂಗ ಸಚಿವ ಬದ್ರ್ ಅಲ್ ಬುಸೈದಿ ಅವರೊಂದಿಗೆ ಭಾನುವಾರ ಮಾತನಾಡಿದ್ದಾರೆ.
ಯುದ್ಧದ ಆರಂಭಕ್ಕೂ ಮುನ್ನ ಅಮೆರಿಕ ಮತ್ತು ಇರಾನ್ ನಡುವೆ ನಡೆದ ಹಿಂದಿನ ಸುತ್ತಿನ ಮಾತುಕತೆಗಳ ಉಸ್ತುವಾರಿಯನ್ನು ಬುಸೈದಿ ವಹಿಸಿದ್ದರು.

