ನವದೆಹಲಿ: ದೇಶದ ಹಲವು ರಾಜ್ಯಗಳು ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿದ್ದು, ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ತಾಪಮಾನವು 47.6 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಈ ಮೂಲಕ ದೇಶದಲ್ಲೇ ಅತ್ಯಂತ ಉಷ್ಣಾಂಶ ದಾಖಲಾದ ಪ್ರದೇಶವಾಗಿ ಹೊರಹೊಮ್ಮಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮೇ 29ರಿಂದ ಬಿಸಿಲಿನ ತೀವ್ರತೆ ದೇಶದಲ್ಲಿ ಹಂತ-ಹಂತವಾಗಿ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ಮುನ್ಸೂಚನೆ ನೀಡಿದೆ.
'ಮುಂದಿನ 7 ದಿನಗಳವರೆಗೆ ಕೇಂದ್ರ ಮತ್ತು ವಾಯವ್ಯ ಭಾರತದಲ್ಲಿ ಅತಿಯಾದ ಉಷ್ಣಗಾಳಿ ಮುಂದುವರಿಯಲಿದೆ. ಅದೇ ರೀತಿ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಮುಂದಿನ 3 ರಿಂದ 5 ದಿನಗಳವರೆಗೆ ತೀವ್ರ ಬಿಸಿಲು ಇರಲಿದೆ ಎಂದು ಇಲಾಖೆ ವರದಿಯಲ್ಲಿ ತಿಳಿಸಿದೆ.
ರಾಜಧಾನಿ ದೆಹಲಿ ಮತ್ತು ಉತ್ತರ ಪ್ರದೇಶದ ಸ್ಥಿತಿ ಹೀಗಿದೆ
ರಾಜಧಾನಿ ದೆಹಲಿಯಲ್ಲಿ ಗರಿಷ್ಠ ತಾಪಮಾನ 43.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 3.4 ಡಿಗ್ರಿ ಹೆಚ್ಚಾಗಿದೆ. ಅಯಾನಗರ್ ಮತ್ತು ರಿಡ್ಜ್ ಹವಾಮಾನ ಕೇಂದ್ರಗಳಲ್ಲಿ ತಲಾ 44.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಲೋಧಿ ರೋಡ್‌ನಲ್ಲಿ 43.8 ಡಿಗ್ರಿ, ಪಾಲಂನಲ್ಲಿ 43.7 ಡಿಗ್ರಿ, ಸಫ್ದರ್‌ಜಂಗ್‌ನಲ್ಲಿ 43.6 ಡಿಗ್ರಿ ಸೆಲ್ಸಿಯಸ್, ಬ್ರಹ್ಮಪುರಿಯಲ್ಲಿ 47.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.
ಲಖನೌನಲ್ಲಿ 42.6 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಇದು ಸಾಮಾನ್ಯಕ್ಕಿಂತ 2.4 ಡಿಗ್ರಿ ಹೆಚ್ಚಾಗಿದೆ. ಬಂಡಾದಲ್ಲಿ 46.8 ಡಿಗ್ರಿ ದಾಖಲಾಗಿದ್ದರೆ, ಪ್ರಯಾಗ್‌ರಾಜ್, ಒರೈ ಮತ್ತು ಝಾನ್ಸಿಯಲ್ಲಿ ತಲಾ 45.6 ಡಿಗ್ರಿ ಹಾಗೂ ಆಗ್ರಾದಲ್ಲಿ 45.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ರಾಜಸ್ಥಾನದಲ್ಲಿ ತಾಪಮಾನ 47 ಡಿಗ್ರಿಗೆ ಏರುವ ಸಾಧ್ಯತೆ
ರಾಜಸ್ಥಾನದಲ್ಲೂ ತಾಪಮಾನ 45 ರಿಂದ 46 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ರಾಜ್ಯದ ಶ್ರೀ ಗಂಗಾನಗರದಲ್ಲಿ 46 ಡಿಗ್ರಿ, ವನಸ್ಥಲಿಯಲ್ಲಿ 45.1 ಡಿಗ್ರಿ, ಚುರುವಿನಲ್ಲಿ 44.9 ಡಿಗ್ರಿ ಮತ್ತು ಜೈಪುರದಲ್ಲಿ 43.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಮುಂದಿನ 3 ರಿಂದ 4 ದಿನಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಮೇ 26 ಮತ್ತು 27ರಂದು ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಲ್ಲಿ ತಾಪಮಾನ 46 ರಿಂದ 47 ಡಿಗ್ರಿ ಸೆಲ್ಸಿಯಸ್ ತಲುಪಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

