ನವದೆಹಲಿ: ಇತ್ತೀಚೆಗೆ ನಿವೃತ್ತರಾದ ನವದೆಹಲಿ ರೈಲ್ವೆ ನಿಲ್ದಾಣದ ವ್ಯವಸ್ಥಾಪಕರೊಬ್ಬರು ತಮ್ಮ 10 ವರ್ಷಗಳ ಅಧಿಕಾರಾವಧಿಯಲ್ಲಿ ಪ್ರಯಾಣಿಕರಿಗೆ ಸೇರಿದ 1,963 ಬೆಲೆಬಾಳುವ ವಸ್ತುಗಳನ್ನು ಹುಡುಕಿ ಕೊಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಈ ಮೂಲಕ ಐತಿಹಾಸಿಕ ಪರಂಪರೆ ಸೃಷ್ಟಿಸಿರುವ ಅವರಿಗೆ ಹತ್ತಾರು ಪ್ರಶಂಸೆಗಳು ಬಂದಿವೆ ಎಂದು ಉತ್ತರ ರೈಲ್ವೆ ಬುಧವಾರ ತಿಳಿಸಿದೆ.
ವಶಪಡಿಸಿಕೊಂಡ ಮತ್ತು ಹಿಂದಿರುಗಿಸಿದ ವಸ್ತುಗಳ ಅಂದಾಜು ಮೌಲ್ಯ ₹5 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಮೊಬೈಲ್ ಫೋನ್, ಲ್ಯಾಪ್‌ಟಾಪ್, ವಿದೇಶಿ ಕರೆನ್ಸಿ, ನಗದು, ಪಾಸ್‌ಪೋರ್ಟ್, ಅಗತ್ಯ ಪ್ರಯಾಣ ದಾಖಲೆಗಳು, ಆಭರಣಗಳು ಮತ್ತು ಇತರ ಅತ್ಯಮೂಲ್ಯ ವೈಯಕ್ತಿಕ ವಸ್ತುಗಳು ಇದರಲ್ಲಿ ಸೇರಿವೆ.
'2016ರ ಏಪ್ರಿಲ್ 6 ರಿಂದ 2026ರ ಜನವರಿ 31ರವರೆಗೆವದೆಹಲಿ ರೈಲ್ವೆ ನಿಲ್ದಾಣದಲ್ಲಿನ ತಮ್ಮ ಅಧಿಕಾರಾವಧಿಯಲ್ಲಿ, ರಾಕೇಶ್ ಕುಮಾರ್ ಶರ್ಮಾ ಅವರು, ಪ್ರಯಾಣಿಕರು ಕಳೆದುಕೊಂಡಿದ್ದ 1,963 ಮೌಲ್ಯಯುತ ವಸ್ತುಗಳನ್ನು ಪತ್ತೆ ಮಾಡಿ ಪ್ರಯಾಣಿಕರಿಗೆ ಹಿಂದಿರುಗಿಸಿದ್ದಾರೆ. ಪ್ರಯಾಣಿಕರ ಬೆಲೆಬಾಳುವ ವಸ್ತುಗಳನ್ನು ಪಾರದರ್ಶಕತೆ ಮತ್ತು ಹೊಣೆಗಾರಿಕೆಯೊಂದಿಗೆ ಮಾಲೀಕರಿಗೆ ಸುರಕ್ಷಿತವಾಗಿ ಹಿಂದಿರುಗಿಸಲಾಗಿದೆ' ಎಂದು ಉತ್ತರ ರೈಲ್ವೆಯ ದೆಹಲಿ ವಿಭಾಗದ ಅಧಿಕೃತ ಹೇಳಿಕೆ ತಿಳಿಸಿದೆ.
ಈ ಸಾಧನೆಯನ್ನು ಇನ್ನಷ್ಟು ಸ್ಪೂರ್ತಿದಾಯಕವಾಗಿಸಿರುವ ಅಂಶವೆಂದರೆ, ನಿವೃತ್ತಿ ನಂತರವೂ ಅವರು ಸಾರ್ವಜನಿಕ ಸೇವೆಯ ಬದ್ಧತೆ ಮುಂದುವರೆಸಿರುವುದು. ನಿವೃತ್ತಿ ಬಳಿಕವೂ ಅವರು ವೈಯಕ್ತಿಕವಾಗಿ 12 ಹೆಚ್ಚುವರಿ ಪ್ರಕರಣಗಳನ್ನು ಭೇದಿಸಲು ಸಹಾಯ ಮಾಡಿದ್ದಾರೆ. ಹೀಗಾಗಿ, ಒಟ್ಟಾರೆ ಅವರು ಪತ್ತೆಮಾಡಿದ ವಸ್ತುಗಳ ಒಟ್ಟು ಸಂಖ್ಯೆ 1,975ಕ್ಕೆ ಏರಿದೆ.
ಪ್ರಯಾಣಿಕರು ಪ್ರಯಾಣದ ಸಮಯದಲ್ಲಿ ಕಳೆದುಕೊಳ್ಳುವ ಅಮೂಲ್ಯ ವಸ್ತುಗಳ ಮೌಲ್ಯವನ್ನು ಅಂದಾಜಿಸಲಾಗದು. ಭೌತಿಕ ವಸ್ತುಗಳ ಜೊತೆಗೆ ಪ್ರಮುಖ ದಾಖಲೆಗಳು, ನೆನಪುಗಳು ಇರುತ್ತವೆ ಎಂದು ಅಧಿಕಾರಿ ಹೇಳಿದ್ದಾರೆ. ಅಂತಹ ವಸ್ತುಗಳ ಸುರಕ್ಷಿತ ಹಿಂದಿರುಗಿಸುವಿಕೆಯು ಅತ್ಯಂತ ಮುಖ್ಯ ಎಂದಿದ್ದಾರೆ.
'ಶರ್ಮಾ ಅವರು ಪ್ರಾಮಾಣಿಕತೆ, ಸಮರ್ಪಣೆ ಮತ್ತು ಸಹಾನುಭೂತಿ ಸೇವೆಗೆ ಉದಾಹರಣೆಯಾಗಿದ್ದಾರೆ. ಈ ಅಸಾಧಾರಣ ಸಾಧನೆಯ ಮೂಲಕ ಅವರು ಭಾರತೀಯ ರೈಲ್ವೆಯಲ್ಲಿ ಜವಾಬ್ದಾರಿ ಮತ್ತು ಜನ ಕೇಂದ್ರಿತ ಸೇವೆಯ ಹೊಸ ಮಾನದಂಡವನ್ನು ಸ್ಥಾಪಿಸಿದ್ದಾರೆ' ಎಂದು ದೆಹಲಿ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪುಷ್ಪೇಶ್ ರಾಮನ್ ತ್ರಿಪಾಠಿ ಹೇಳಿದ್ದಾರೆ.

