ಕೋಲ್ಕತ್ತ: ಪಕ್ಷದ ಸಹೋದ್ಯೋಗಿ ಕಲ್ಯಾಣ್ ಬ್ಯಾನರ್ಜಿ ಅವರು ಸಂಸತ್ತಿನ ಒಳಗೆ ಮೌಖಿಕವಾಗಿ ನಿಂದಿಸಿದ್ದಾರೆ ಮತ್ತು ಮಹಿಳಾ ಸಂಸದರ ವಿರುದ್ಧ ಸ್ತ್ರೀದ್ವೇಷದ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಸಂಸದೆ ಕಾಕೊಳಿ ಘೋಷ್ ದಸ್ತಿದಾರ್ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ ಸೋಲಿನ ನಂತರ ಟಿಎಂಸಿ ಒಳಗೆ ಭಿನ್ನಾಭಿಪ್ರಾಯಗಳು ತೀವ್ರಗೊಳ್ಳುತ್ತಿದ್ದು, ಭಿನ್ನಮತ ಮತ್ತು ಆಂತರಿಕ ಅಸಮಾಧಾನಗಳು ಸಾರ್ವಜನಿಕವಾಗಿ ಹೊರಬರುತ್ತಿರುವ ಬೆನ್ನಲ್ಲೇ ಈ ದೂರು ದಾಖಲಾಗಿದೆ.
ಪತ್ರದಲ್ಲಿ ಅಧಿಕೃತವಾಗಿ ದೂರು ದಾಖಲಿಸಲು ಅನುಮತಿ ಕೋರಿದ್ದಾರೆ. ಅಲ್ಲದೆ ಕಲ್ಯಾಣ್ ಬ್ಯಾನರ್ಜಿ ವಿರುದ್ಧ ಕ್ರಮಕ್ಕೆ ಅವರು ಒತ್ತಾಯಿಸಿದ್ದಾರೆ.
'ಲೋಕಸಭೆಯ ಒಳಗೆ ನನಗೆ ಮೌಖಿಕವಾಗಿ ನಿಂದಿಸಿರುವ ಎಐಟಿಸಿಯ ಲೋಕಸಭಾ ಸದಸ್ಯ ಕಲ್ಯಾಣ್ ಬ್ಯಾನರ್ಜಿ ವಿರುದ್ಧ ನಿಮ್ಮ ಬಳಿ ಅಧಿಕೃತ ದೂರು ದಾಖಲಿಸಲು ನಿಮ್ಮ ಅನುಮತಿಯನ್ನು ಕೋರುತ್ತೇನೆ. ಈ ಸ್ತ್ರೀದ್ವೇಷವು ಹಲವು ಮಹಿಳಾ ಸದಸ್ಯರ ವಿರುದ್ಧವೂ ನಡೆದಿದ್ದು, ಇದಕ್ಕೆ ಶಿಕ್ಷೆಯಾಗಬೇಕಿದೆ' ಎಂದು ಪಶ್ಚಿಮ ಬಂಗಾಳದ ಬಾರಾಸತ್‌ನ ಸಂಸದೆ ಪತ್ರದಲ್ಲಿ ಬರೆದಿದ್ದಾರೆ.
ಈ ದೂರಿನ ಕುರಿತು ಬ್ಯಾನರ್ಜಿ ಆಗಲಿ ಅಥವಾ ಟಿಎಂಸಿ ನಾಯಕತ್ವವಾಗಲಿ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಾಲ್ಕು ಅವಧಿಯ ಬಾರಾಸತ್ ಸಂಸದೆ ಟಿಎಂಸಿಯ ಎಲ್ಲಾ ಸಾಂಸ್ಥಿಕ ಹುದ್ದೆಗಳಿಗೆ ರಾಜೀನಾಮೆ ನೀಡಿ, ಪಕ್ಷದ ನಾಯಕತ್ವದ ಕೆಲವು ವರ್ಗಗಳ ವಿರುದ್ಧ ತೀವ್ರ ರಾಜಕೀಯ ವಾಗ್ದಾಳಿ ನಡೆಸಿದ ಕೇವಲ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.

