ದುಬೈ (ಎಪಿ/ಎಎಫ್‌ಪಿ): ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮವನ್ನು 60 ದಿನಗಳವರೆಗೆ ವಿಸ್ತರಿಸುವ ಮತ್ತು ಇರಾನ್‌ನ ಪರಮಾಣು ಕಾರ್ಯಕ್ರಮ ಸಂಬಂಧ ಮಾತುಕತೆಗಳನ್ನು ಪ್ರಾರಂಭಿಸುವ ಕುರಿತು ಉಭಯ ದೇಶಗಳು ತಾತ್ಕಾಲಿಕ ಒಪ್ಪಂದಕ್ಕೆ ಬಂದಿವೆ ಎಂದು ಅಮೆರಿಕದ ಹಿರಿಯಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತ ಒಪ್ಪಂದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೂ ಸಹಿ ಹಾಕಿಲ್ಲ, ಅದನ್ನು ಪರಿಶೀಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಮೆರಿಕದ ಜತೆಗಿನ ತಾತ್ಕಾಲಿಕ ಒಪ್ಪಂದದ ಮಾಹಿತಿಯನ್ನು ಇರಾನ್ ತಕ್ಷಣಕ್ಕೆ ದೃಢಪಡಿಸಿಲ್ಲ. ಈ ಒಪ್ಪಂದದ ವಿವರಗಳನ್ನು 'ಆಕ್ಸಿಯೋಸ್' ಸುದ್ದಿ ಸಂಸ್ಥೆ ಮೊದಲಿಗೆ ವರದಿ ಮಾಡಿದೆ.
ವಾಷಿಂಗ್ಟನ್ ಮತ್ತು ಟೆಹರಾನ್ ಪರಸ್ಪರರ ವಿರುದ್ಧ ಪದೇ ಪದೇ ಕದನ ವಿರಾಮ ಉಲ್ಲಂಘಿಸಿದ ಆರೋಪಗಳನ್ನು ಮಾಡಿವೆ. ಇದರ ನಡುವೆಯೇ ಉಭಯ ದೇಶಗಳ ಸಮಾಲೋಚಕರು ಈ ತಾತ್ಕಾಲಿಕ ಒಪ್ಪಂದಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಒಪ್ಪಂದದ ಕರಡಿಗೆ ಎರಡೂ ದೇಶಗಳು ಬಹುತೇಕ ಒಪ್ಪಿಕೊಂಡಿವೆ. ಆದರೆ ಅನುಮೋದನೆ ಬಾಕಿಯಿದೆ ಎಂದು ಗೊತ್ತಾಗಿದೆ.
ಈ ಒಪ್ಪಂದಕ್ಕೆ ತಕ್ಷಣ ಸಹಿ ಹಾಕದ ಟ್ರಂಪ್, ಯೋಚಿಸಲು ಒಂದೆರಡು ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಅಧಿಕಾರಿಗಳ ಬಳಿ ಹೇಳಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ 'ಆಕ್ಸಿಯೋಸ್' ವರದಿ ಮಾಡಿದೆ.
ಒಪ್ಪಂದದಲ್ಲಿ ಏನಿದೆ: ಒಪ್ಪಂದವು 60 ದಿನಗಳ ಕದನ ವಿರಾಮದ ಜತೆಗೆ ಹೊರ್ಮುಜ್ ಜಲಸಂಧಿಯಲ್ಲಿ ಮುಕ್ತ ಸಾಗಣೆಯ ಅಂಶವನ್ನು ಒಳಗೊಂಡಿದೆ. ಜಲಸಂಧಿಯಲ್ಲಿ ಸಾಗುವ ಹಡಗುಗಳಿಗೆ ಸುಂಕ ವಿಧಿಸದೇ, ಕಿರುಕುಳ ನೀಡದೆ ಸಾಗಲು ಇರಾನ್ ಅವಕಾಶ ಮಾಡಿಕೊಡಬೇಕು. ಅಲ್ಲದೆ, ಜಲಸಂಧಿಯಲ್ಲಿ ಅಡಗಿಸಿಟ್ಟಿರುವ ಸ್ಫೋಟಕಗಳನ್ನು 30 ದಿನಗಳಲ್ಲಿ ತೆರವುಗೊಳಿಸಬೇಕು ಎಂಬ ಅಂಶಗಳು ಪ್ರಮುಖವಾಗಿವೆ ಎಂದು ಮೂಲಗಳು ಹೇಳಿವೆ.
ಇದಕ್ಕೆ ಪ್ರತಿಯಾಗಿ ಅಮೆರಿಕವು ಇರಾನ್ ಮೇಲಿನ ನೌಕಾ ದಿಗ್ಬಂಧನ ತೆರವುಗೊಳಿಸುತ್ತದೆ. ಅಲ್ಲದೆ ಇರಾನ್‌ನ ತೈಲವನ್ನು ಮುಕ್ತವಾಗಿ ಮಾರಾಟ ಮಾಡಲು ಸಾಧ್ಯವಾಗುವಂತೆ ಕೆಲ ನಿರ್ಬಂಧಗಳನ್ನು ತೆಗೆದು, ವಿನಾಯಿತಿ ನೀಡಲು ಸಿದ್ಧವಾಗಿದೆ ಎನ್ನಲಾಗಿದೆ.
ಇರಾನ್‌ನಲ್ಲಿರುವ ಸಮೃದ್ಧೀ ಕರಿಸಿದ ಯುರೇನಿಯಂ ಅನ್ನು ಹೇಗೆ ವಿಲೇವಾರಿ ಮಾಡಬಹುದು ಎಂಬುದರ ಕುರಿತು ಎರಡೂ ದೇಶಗಳು ಚರ್ಚೆ ನಡೆಸಲಿವೆ ಎಂದು ಮೂಲಗಳು ಹೇಳಿವೆ.

