ನವದೆಹಲಿ/ಗುರುಗ್ರಾಮ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲಾಗಿರುವ ಪಂಜಾಬ್‌ನ ಕೈಗಾರಿಕಾ ಸಚಿವ ಸಂಜೀವ್ ಅರೋರಾ ಅವರನ್ನು ಏಳು ದಿನ ಜಾರಿ ನಿರ್ದೇಶನಾಲಯದ (ಇ.ಡಿ) ವಶಕ್ಕೆ ಒಪ್ಪಿಸಿ ಗುರುಗ್ರಾಮದ ನ್ಯಾಯಾಲಯ ಆದೇಶ ಹೊರಡಿಸಿದೆ.
ಜಿಎಸ್‌ಟಿ ವಂಚನೆ ಪ್ರಕರಣದಲ್ಲಿ 62 ವರ್ಷದ ಅರೋರಾ ಅವರನ್ನು ಶನಿವಾರ ಸಂಜೆ ಚಂಡೀಗಢದ ಅಧಿಕೃತ ನಿವಾಸದಲ್ಲಿ ಇ.ಡಿ ಅಧಿಕಾರಿಗಳು ಬಂಧಿಸಿದ್ದರು.
ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅರೋರಾ ಅವರನ್ನು ಇ.ಡಿ ಅಧಿಕಾರಿಗಳು ಚಂಡೀಗಢದಿಂದ ರಸ್ತೆಯ ಮೂಲಕ ಗುರುಗ್ರಾಮಕ್ಕೆ ಕರೆತಂದಿದ್ದರು.
ಸಚಿವರ ಪರ ಪ್ರತಿಕ್ರಿಯಿಸಿದ ವಕೀಲರು, ಮೇ 5ರಂದು ಪ್ರಕರಣ ದಾಖಲಿಸಿ ಮೇ 9ರಂದು ಅರೋರಾ ಅವರನ್ನು ಬಂಧಿಸಲಾಗಿದೆ. ಇದು 'ರಾಜಕೀಯ ಪ್ರೇರಿತ' ಎಂದು ದೂರಿದ್ದಾರೆ.
₹100 ಕೋಟಿಗೂ ಹೆಚ್ಚು ಮೊತ್ತದ ಮೊಬೈಲ್‌ಗಳ ಖರೀದಿಯಲ್ಲಿ ನಕಲಿ ಜಿಎಸ್‌ಟಿ ಬಿಲ್ ಸೃಷ್ಟಿಸಿ ದುಬೈನಿಂದ ಭಾರತಕ್ಕೆ ಅಕ್ರಮವಾಗಿ ಹಣ ವರ್ಗಾಯಿಸಲಾಗಿದೆ ಎಂದು ಇ.ಡಿ ಆರೋಪಿಸಿತ್ತು. ಅರೋರಾ ಅವರಿಗೆ ಸಂಬಂಧಿಸಿದ ಗುರುಗ್ರಾಮದ ಉದ್ಯೋಗ್ ವಿಹಾರದಲ್ಲಿರುವ ಹ್ಯಾಂಪ್ಟನ್ ಸ್ಕೈ ರಿಯಾಲ್ಟಿ ಲಿಮಿಟೆಡ್ ಕಂಪನಿಯ ಕಚೇರಿಯಲ್ಲೂ ಇ.ಡಿ ಶೋಧ ನಡೆಸಿತ್ತು.
ಇ.ಡಿ ಕ್ರಮವನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಖಂಡಿಸಿದ್ದಾರೆ. ಕೇಂದ್ರ ಸರ್ಕಾರವು ಇ.ಡಿಯನ್ನು ಅಸ್ತ್ರವಾಗಿ ಬಳಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸುತ್ತಿದೆ ಎಂದು ಆರೋಪಿಸಿದ್ದಾರೆ.

