ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಗುರುವಾರ ಸಚಿವ ಸಂಪುಟವನ್ನು ವಿಸ್ತರಿಸುವ ಸಾಧ್ಯತೆಯಿದ್ದು, ಎಡಪಕ್ಷಗಳ ಒತ್ತಾಯದ ಮೇರೆಗೆ ಎಐಎಡಿಎಂಕೆ ಬಂಡಾಯ ಶಾಸಕರನ್ನು ಸಂಪುಟದಿಂದ ದೂರವಿಡಲಿದ್ದಾರೆ ಎಂದು ವರದಿಯಾಗಿದೆ.
ಎಐಎಡಿಎಂಕೆ ಬಂಡಾಯ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡರೆ, ಟಿವಿಕೆ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಮರುಪರಿಶೀಲಿಸಬೇಕಾಗುತ್ತದೆ ಎಂದು ಕಾಂಗ್ರೆಸ್, ಎಡಪಕ್ಷಗಳು ಎಚ್ಚರಿಕೆ ನೀಡಿದ ನಂತರ ವಿಜಯ್ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಕಾಂಗ್ರೆಸ್‌ನಿಂದ ಪಿ. ವಿಶ್ವನಾಥನ್ ಮತ್ತು ಎಸ್. ರಾಜೇಶ್ ಕುಮಾರ್ ಅವರು ಸಂಪುಟ ಸೇರುವ ಇಬ್ಬರು ಸಂಭಾವ್ಯ ಅಭ್ಯರ್ಥಿಗಳಾಗಿದ್ದಾರೆ. ತಲಾ ಒಂದು ಸಚಿವ ಸ್ಥಾನ ಪಡೆಯಲಿರುವ ವಿಸಿಕೆ ಮತ್ತು ಐಯುಎಂಎಲ್ ಇನ್ನು ತಮ್ಮ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿಲ್ಲ.
'ನಾಳೆ ಸಚಿವ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಯಿದ್ದು, ಸುಮಾರು 15 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈಗಾಗಲೇ ಮೇ 10 ರಂದು ವಿಜಯ್ ಅವರ ಜೊತೆಗೆ 9 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಆರ್. ವಿ. ಅರ್ಲೇಕರ್ ಅವರು ಕೇರಳದಿಂದ ಬುಧವಾರ ರಾತ್ರಿ ಚೆನ್ನೈಗೆ ಆಗಮಿಸಲಿದ್ದು, ಆ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ' ಎಂದು ಪಕ್ಷದ ಮೂಲಗಳು ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿವೆ.
ವಿಶ್ವಾಸಮತಯಾಚನೆ ವೇಳೆ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಎಸ್. ಪಿ. ವೇಲುಮಣಿ ಮತ್ತು ಸಿ. ವಿ. ಷಣ್ಮುಗಂ ನೇತೃತ್ವದ ಎಐಎಡಿಎಂಕೆ ಬಂಡಾಯ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದರು. ಸಹಜವಾಗಿಯೇ ವಿಜಯ್ ಸಂಪುಟ ಸೇರುವ ನಿರೀಕ್ಷೆಯಲ್ಲಿಯೂ ಇದ್ದರು ಎನ್ನಲಾಗಿದೆ. ಆದರೆ, ಈ ನಿರ್ಧಾರವನ್ನು ಸ್ವತಃ ವಿಜಯ್ ಅವರೇ ವಿರೋಧಿಸಿದ್ದಾರೆ ಎನ್ನಲಾಗಿದೆ.
ಅಲ್ಲದೆ, ತಮ್ಮ ಪಕ್ಷದ ವಿರುದ್ಧ ವಿರೋಧ ಪಕ್ಷಗಳು ಕುದುರೆ ವ್ಯಾಪಾರದ ಆರೋಪ ಮಾಡುತ್ತಿದ್ದು, ಈ ವೇಳೆ ಎಐಎಡಿಎಂಕೆ ಶಾಸಕರನ್ನು ಸೇರಿಸಿಕೊಂಡರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುತ್ತದೆ ಎಂಬ ಆತಂಕವೂ ಟಿವಿಕೆ ಒಳಗೆ ಇದೆ. ಜೊತೆಗೆ, ಬಿಜೆಪಿ ವಿರೋಧಿ ನಿಲುವನ್ನು ಕಾಯ್ದುಕೊಳ್ಳುವುದು ಟಿವಿಕೆಗೆ ಈಗ ಮುಖ್ಯವಾಗಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದೆ ವಿಸಿಕೆ ಮುಖ್ಯಸ್ಥ ತೋಳ್ ತಿರುಮಾವಾಳವನ್, ಎಐಎಡಿಎಂಕೆಯ ಬಂಡಾಯ ಶಾಸಕರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ಮಾಹಿತಿಯನ್ನು ಟಿವಿಕೆ ನಮಗೆ ಖಚಿತಪಡಿಸಿದೆ' ಎಂದಿದ್ದಾರೆ.

