ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರುವ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಪಕ್ಷದೊಳಗೆ ಭಿನ್ನಮತ ತೀವ್ರಗೊಂಡಿರುವ ಲಕ್ಷಣಗಳು ಗೋಚರಿಸಿವೆ.
ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರಕ್ಕೆ ಬೆಂಬಲ ನೀಡುವ ಪ್ರಶ್ನೆಯಲ್ಲಿ ಶಾಸಕರು ಎರಡು ಬಣಗಳಾಗಿ ವಿಭಜನೆಯಾಗಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ವಿರುದ್ಧ ಅಸಮಾಧಾನವೂ ಹೊರಹೊಮ್ಮಿದೆ.ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಪಳನಿಸ್ವಾಮಿ ನೇತೃತ್ವದಲ್ಲಿ ಹಲವು ಸುತ್ತಿನ ಸಭೆಗಳು ನಡೆದಿವೆ. ಆದರೆ TVK ಸರ್ಕಾರಕ್ಕೆ ಬೆಂಬಲ ನೀಡುವ ವಿಚಾರದಲ್ಲಿ ಪಕ್ಷದೊಳಗೆ ಒಮ್ಮತ ಮೂಡಿಲ್ಲ. ಒಂದು ವಲಯವು ಸರ್ಕಾರ ರಚನೆಯಲ್ಲಿ TVKಗೆ ಬೆಂಬಲ ನೀಡುವ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದರೆ, ಮತ್ತೊಂದು ವಲಯ ಹೊರಗಿನಿಂದ ಬೆಂಬಲ ನೀಡುವ ಪರವಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.
ಪಕ್ಷದ ಕಳಪೆ ಚುನಾವಣಾ ಪ್ರದರ್ಶನಕ್ಕೆ ನಾಯಕತ್ವವೇ ಕಾರಣ ಎಂದು ಆರೋಪಿಸಿರುವ ಕೆಲ ಶಾಸಕರು, ಪಳನಿಸ್ವಾಮಿ ಸ್ಥಾನ ತ್ಯಜಿಸಬೇಕೆಂದು ಒತ್ತಾಯಿಸಿದ್ದಾರೆ. ಪಳನಿಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳಿಗೆ ಹಿರಿಯ ನಾಯಕರು ಹಾಗೂ ಮಾಜಿ ಸಚಿವರಾದ ಎಸ್.ಪಿ. ವೇಲುಮಣಿ ಮತ್ತು ಸಿ.ವಿ. ಷಣ್ಮುಗಂ ತಮ್ಮ ಬೆಂಬಲಿಗ ಶಾಸಕರೊಂದಿಗೆ ಗೈರುಹಾಜರಾಗಿರುವುದು ಪಕ್ಷದೊಳಗಿನ ಅಸಮಾಧಾನಕ್ಕೆ ಮತ್ತಷ್ಟು ಬಲ ನೀಡಿದೆ.
ಮೇ 9ರಂದು ಪುದುಚೇರಿಯ ಐಷಾರಾಮಿ ರೆಸಾರ್ಟ್ ನಲ್ಲಿ ಮೂರು ದಿನಗಳ ಕಾಲ ತಂಗಿದ್ದ ಕೆಲ ಶಾಸಕರು ಬಳಿಕ ಚೆನ್ನೈಗೆ ಮರಳಿ ಪಳನಿಸ್ವಾಮಿ ನೇತೃತ್ವದ ಸಭೆಯಲ್ಲಿ ಭಾಗವಹಿಸಿದ್ದರು. 47 ಶಾಸಕರಲ್ಲಿ ಸುಮಾರು ಐವರು ಸಭೆಗೆ ಗೈರುಹಾಜರಾಗಿದ್ದರು ಎಂದು ವರದಿಯಾಗಿದೆ.
TVK ನಾಯಕ ಸಿ. ಜೋಸೆಫ್ ವಿಜಯ್ ಅವರನ್ನು ನೇರವಾಗಿ ಸಂಪರ್ಕಿಸದೆ ಯಾವುದೇ ಬೆಂಬಲದ ನಿರ್ಧಾರ ಕೈಗೊಳ್ಳಬಾರದು ಎಂಬ ನಿಲುವನ್ನು ಪಳನಿಸ್ವಾಮಿ ವ್ಯಕ್ತಪಡಿಸಿದ್ದರೆಂದು ತಿಳಿದುಬಂದಿದೆ. ಆದರೆ ಷಣ್ಮುಗಂ, ವೇಲುಮಣಿ ಮತ್ತು ಅವರ ಬೆಂಬಲಿಗರು ಆಡಳಿತ ಪಕ್ಷಕ್ಕೆ ಬೆಂಬಲ ನೀಡುವತ್ತ ಒಲವು ತೋರಿಸುತ್ತಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ಹೇಳಿವೆ.
"ಪಕ್ಷದೊಳಗೆ ಸ್ಪಷ್ಟವಾದ ಒಡಕು ಕಾಣಿಸುತ್ತಿದೆ. ಅನೇಕ ಶಾಸಕರು ನಾಯಕತ್ವದಲ್ಲಿ ಬದಲಾವಣೆ ಬಯಸುತ್ತಿದ್ದಾರೆ. ಪಳನಿಸ್ವಾಮಿ ಮುಂದುವರಿದರೆ, ಕೆಲವು ಶಾಸಕರು TVKಗೆ ಬೆಂಬಲ ನೀಡುವ ಸಾಧ್ಯತೆಯಿದೆ" ಎಂದು AIADMKಯ ಮಾಜಿ ನಾಯಕ ಕೆ.ಸಿ. ಪಳನಿಸ್ವಾಮಿ ಹೇಳಿದ್ದಾರೆ.
ಪಕ್ಷ ಮತ್ತೆ ಒಗ್ಗೂಡಲು ಹಾಗೂ ಮುಂದಿನ ಚುನಾವಣಾ ಸವಾಲುಗಳನ್ನು ಎದುರಿಸಲು ಪಳನಿಸ್ವಾಮಿ ಸ್ವಯಂಪ್ರೇರಿತವಾಗಿ ಹುದ್ದೆಯಿಂದ ಕೆಳಗಿಳಿಯಬೇಕು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
234 ವಿಧಾನಸಭಾ ಕ್ಷೇತ್ರಗಳ ಪೈಕಿ 167 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ AIADMK ಕೇವಲ 47 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಯಿತು.
►ಪ್ರಮಾಣವಚನ ಕಾರ್ಯಕ್ರಮದಲ್ಲೂ ಬಹಿರಂಗವಾದ ಭಿನ್ನಮತ
17ನೇ ತಮಿಳುನಾಡು ವಿಧಾನಸಭೆಯ ಪ್ರಮಾಣವಚನ ಕಾರ್ಯಕ್ರಮದಲ್ಲಿಯೂ AIADMK ಶಾಸಕರೊಳಗಿನ ಭಿನ್ನಾಭಿಪ್ರಾಯ ಬಹಿರಂಗವಾಯಿತು. ಪಕ್ಷದ ಹೊಸದಾಗಿ ಆಯ್ಕೆಯಾದ ಸದಸ್ಯರು ಸೋಮವಾರ ಎರಡು ಪ್ರತ್ಯೇಕ ಗುಂಪುಗಳಾಗಿ ವಿಧಾನಸಭೆಗೆ ಆಗಮಿಸಿದ್ದು, ಚುನಾವಣೆಯ ಬಳಿಕ ಪಕ್ಷದಲ್ಲಿ ಉಂಟಾಗಿರುವ ಬಿರುಕು ಮತ್ತೊಮ್ಮೆ ಸ್ಪಷ್ಟವಾಯಿತು.
ಮಾಜಿ ಸಚಿವರಾದ ಕೆ.ಪಿ. ಮುನುಸಾಮಿ ಹಾಗೂ ತಲವೈ ಎನ್. ಸುಂದರಂ ಸೇರಿದ್ದ ಒಂದು ಗುಂಪು ಪಳನಿಸ್ವಾಮಿ ಅವರೊಂದಿಗೆ ವಿಧಾನಸಭೆಗೆ ತೆರಳಿ ಪ್ರಮಾಣವಚನ ಸ್ವೀಕರಿಸಿತು. ಇನ್ನೊಂದು ಗುಂಪು ಮಾಜಿ ಸಚಿವ ಎಸ್.ಪಿ. ವೇಲುಮಣಿ ನೇತೃತ್ವದಲ್ಲಿ, ಮಾಜಿ ಸಚಿವ ಡಾ. ಸಿ. ವಿಜಯಭಾಸ್ಕರ್ ಅವರೊಂದಿಗೆ ಸ್ವಲ್ಪ ಸಮಯದ ಬಳಿಕ ವಿಧಾನಸಭೆಗೆ ಆಗಮಿಸಿತು.
ಸಾಮಾನ್ಯವಾಗಿ AIADMK ಶಾಸಕರು ಒಟ್ಟಾಗಿ ಸದನ ಪ್ರವೇಶಿಸುವ ಪದ್ಧತಿ ಹೊಂದಿದ್ದರೂ, ಈ ಬಾರಿ ಎರಡು ಪ್ರತ್ಯೇಕ ಗುಂಪುಗಳಾಗಿ ಕಾಣಿಸಿಕೊಂಡಿದ್ದು ಪಕ್ಷದೊಳಗಿನ ಬಿರುಕು ಮತ್ತಷ್ಟು ಗಾಢವಾಗುತ್ತಿರುವ ಸೂಚನೆ ಎಂದು ರಾಜಕೀಯ ವಲಯ ವಿಶ್ಲೇಷಿಸಿದೆ.

