ನವದೆಹಲಿ: ಭೋಜ್‌ಶಾಲಾ-ಕಮಲ್ ಮೌಲಾ ಮಸೀದಿ ವಿವಾದಕ್ಕೆ ಸಂಬಂಧಿಸಿ ಮಧ್ಯಪ್ರದೇಶ ಹೈಕೋರ್ಟ್ ನೀಡಿದ ತೀರ್ಪು ಸ್ವೀಕಾರಾರ್ಹವಲ್ಲ. ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಹೇಳಿದೆ.
ಭೋಜ್‌ಶಾಲಾ-ಕಮಲ್ ಮೌಲಾ ಮಸೀದಿ ವಿವಾದಿತ ಸಂಕೀರ್ಣವನ್ನು ಸರಸ್ವತಿ ದೇವಾಲಯವೆಂದು ಇತ್ತೀಚೆಗೆ ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪು ಐತಿಹಾಸಿಕ ಸಂಗತಿಗಳು, ಅಧಿಕೃತ ದಾಖಲೆಗಳು, ಪುರಾತತ್ವ ಇಲಾಖೆ ಪುರಾವೆಗಳು ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಮೀಕ್ಷೆಯ ಹಿಂದಿನ ನಿಲುವಿಗೆ ವಿರುದ್ಧವಾಗಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ.
ಕಮಲ್ ಮೌಲಾ ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪನ್ನು ಪ್ರಶ್ನಿಸಲಿದೆ. ಈ ಕಾನೂನು ಹೋರಾಟಕ್ಕೆ ಸಾಧ್ಯವಿರುವ ಎಲ್ಲಾ ಬೆಂಬಲವನ್ನು ನೀಡುತ್ತೇವೆ ಎಂದು ಮಂಡಳಿಯು ಹೇಳಿದೆ.
ಈ ಕುರಿತು ಪ್ರಕಟಣೆಯನ್ನು ಹೊರಡಿಸಿದ ಮಂಡಳಿಯ ವಕ್ತಾರ ಡಾ.ಎಸ್.ಕ್ಯೂ.ಆರ್. ಇಲ್ಯಾಸ್, ಐತಿಹಾಸಿಕ ಪುರಾವೆಗಳು, ಕಂದಾಯ ಇಲಾಖೆಯ ಅಧಿಕೃತ ದಾಖಲೆಗಳು ಮತ್ತು ಶತಮಾನಗಳಷ್ಟು ಹಳೆಯದಾದ ಮುಸ್ಲಿಂ ಧಾರ್ಮಿಕ ಸಂಬಂಧವನ್ನು ಕಡೆಗಣಿಸಿ ಹೈಕೋರ್ಟ್ ಈ ತೀರ್ಪುನ್ನು ನೀಡಿದೆ. ಈ ತೀರ್ಪು 1991ರ ಪೂಜಾ ಸ್ಥಳಗಳ ಕಾಯ್ದೆಯ ಆಶಯ ಮತ್ತು ಸಾಂವಿಧಾನಿಕ ಆದೇಶಕ್ಕೂ ನೇರ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಈ ಹಿಂದೆ ಈ ಸ್ಥಳದ ಧಾರ್ಮಿಕ ಸ್ವರೂಪವನ್ನು ಒಪ್ಪಿಕೊಂಡಿತ್ತು. ದಶಕಗಳಿಂದ, ಂSIಯ ಅಧಿಕೃತ ದಾಖಲೆಗಳು ಮತ್ತು ಸೂಚನಾ ಫಲಕಗಳು ಈ ಸ್ಥಳವನ್ನು ಭೋಜ್‌ಶಾಲಾ / ಕಮಲ್ ಮೌಲಾ ಮಸೀದಿ ಎಂದು ಬಣ್ಣಿಸಿದೆ. ಇದು ಆ ಸ್ಥಳದ ಧಾರ್ಮಿಕ ಸ್ವರೂಪಕ್ಕೆ ಅಧಿಕೃತ ಮಾನ್ಯತೆ ನೀಡಿದಂತಾಗಿದೆ. ಇದಲ್ಲದೆ 2003ರ ಆಡಳಿತಾತ್ಮಕ ವ್ಯವಸ್ಥೆಯ ಪ್ರಕಾರ, ಹಿಂದೂಗಳಿಗೆ ಮಂಗಳವಾರ ಪೂಜೆ ಸಲ್ಲಿಸಲು ಮತ್ತು ಮುಸ್ಲಿಮರಿಗೆ ಶುಕ್ರವಾರ ಪ್ರಾರ್ಥನೆ ಸಲ್ಲಿಸಲು ಅವಕಾಶವಿತ್ತು. ಈ ವ್ಯವಸ್ಥೆಯು ಎರಡೂ ಸಮುದಾಯಗಳ ಐತಿಹಾಸಿಕ ಹಕ್ಕುಗಳು ಮತ್ತು ಪೂಜಾ ಹಕ್ಕುಗಳಿಗೆ ಂSI ಮಾನ್ಯತೆ ನೀಡಿರುವುದನ್ನು ಸ್ಪಷ್ಟಪಡಿಸುತ್ತದೆ. ಆದ್ದರಿಂದ, ಹೈಕೋರ್ಟ್‌ನ ನಿರ್ಧಾರವು ಂSIಯ ಹಿಂದಿನ ನಿಲುವಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಐತಿಹಾಸಿಕ ಕಂದಾಯ ದಾಖಲೆಗಳು ಆ ರಚನೆಯನ್ನು ಮಸೀದಿ ಎಂದು ಸ್ಥಿರವಾಗಿ ಗುರುತಿಸಿವೆ ಎಂದು ಮುಸ್ಲಿಂಪರರು ನ್ಯಾಯಾಲಯದ ಮುಂದೆ ಸ್ಪಷ್ಟವಾಗಿ ವಾದಿಸಿದ್ದಾರೆ. ಆದರೆ ರಾಜ ಭೋಜನ ಕಾಲದ ಸರಸ್ವತಿ ದೇವಸ್ಥಾನವು ಅದೇ ಸ್ಥಳದಲ್ಲಿದೆ ಎಂದು ಹೇಳಲು ಯಾವುದೇ ನಿರ್ಣಾಯಕ ಐತಿಹಾಸಿಕ ಪುರಾವೆಗಳಿಲ್ಲ. ವಿಷಾದನೀಯವೇನೆಂದರೆ, ಈ ಅಧಿಕೃತ ಐತಿಹಾಸಿಕ ಮತ್ತು ಅಧಿಕೃತ ದಾಖಲೆಗಳಿಗೆ ಸರಿಯಾದ ಪ್ರಾಮುಖ್ಯತೆಯನ್ನು ನೀಡಲು ನ್ಯಾಯಾಲಯ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.
ಎಎಸ್‌ಐ ತನ್ನ ಇತ್ತೀಚಿನ ಸಮೀಕ್ಷೆಯಲ್ಲಿ ಕೆಲವು ಕಂಬಗಳು, ಕೆತ್ತನೆಗಳು ಮತ್ತು ವಾಸ್ತುಶಿಲ್ಪದ ಅಂಶಗಳನ್ನು ದೇವಾಲಯದ ಪುರಾವೆಗಳಾಗಿ ಉಲ್ಲೇಖಿಸಿದೆ. ಆದರೆ, ಅನೇಕ ಮಧ್ಯಕಾಲೀನ ಇಸ್ಲಾಮಿಕ್ ಕಟ್ಟಡಗಳಲ್ಲಿ ಹಿಂದಿನ ನಿರ್ಮಾಣಗಳ ವಸ್ತುಗಳನ್ನು ಮರುಬಳಕೆ ಮಾಡಲಾಗುತ್ತಿತ್ತು ಎಂಬುದನ್ನೂ ಗಮನದಲ್ಲಿಡಬೇಕು. ಕೇವಲ ಇಸ್ಲಾಮೇತರ ವಾಸ್ತುಶಿಲ್ಪದ ಅವಶೇಷಗಳು ಇರುವುದರಿಂದ ಶತಮಾನಗಳಷ್ಟು ಹಳೆಯ ಮಸೀದಿಯ ಸ್ಥಾನಮಾನವನ್ನು ಕಾನೂನಾತ್ಮಕವಾಗಿ ಅಳಿಸಿ ಹಾಕುವುದು ಸರಿಯಲ್ಲ. ಹಿಂದಿನ ನಿರ್ಮಾಣದ ಕೆಲವು ಅವಶೇಷಗಳು ಆ ಸ್ಥಳದ ಧಾರ್ಮಿಕ ಗುರುತಿನ ಅಂತಿಮ ಸಾಕ್ಷ್ಯವೆಂದು ಪರಿಗಣಿಸಲಾಗದು ಎಂದು ಅವರು ಹೇಳಿದ್ದಾರೆ.
ನ್ಯಾಯಾಲಯ ರಾಜಾ ಭೋಜನಿಗೆ ಸಂಬಂಧಿಸಿದ ಪರಂಪರೆಗಳು, ಸಂಸ್ಕೃತ ಅಧ್ಯಯನದ ಐತಿಹಾಸಿಕ ಪರಂಪರೆ ಹಾಗೂ ಪುರಾತತ್ವ ಇಲಾಖೆಯ ಸಮೀಕ್ಷಾ ವರದಿಗಳಿಗೆ ಅತಿಯಾದ ಮಹತ್ವ ನೀಡಿದೆ. ನಿರಂತರ ಧಾರ್ಮಿಕ ಬಳಕೆ, ಅಧಿಕೃತ ದಾಖಲೆಗಳು ಹಾಗೂ ಸಂವಿಧಾನಾತ್ಮಕ ತತ್ವಗಳನ್ನು ಕಡೆಗಣಿಸಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ ತೀರ್ಪು ಪುರಾತನ ದೇವಾಲಯ ಮತ್ತು ನಾಗರಿಕತೆಯ ನಿರೂಪಣೆಗೆ ಪ್ರಾಮುಖ್ಯತೆಯನ್ನು ನೀಡುತ್ತದೆ, ಆದರೆ ಮಸೀದಿಯ ಶತಮಾನಗಳಷ್ಟು ಹಳೆಯ ಸ್ಥಾನಮಾನ, ಅಧಿಕೃತ ದಾಖಲೆಗಳು, ಂSI ದಾಖಲೆ, ಸ್ವಾತಂತ್ರ್ಯದ ನಂತರದ ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪವನ್ನು ಸಂರಕ್ಷಿಸುವ ಸಾಂವಿಧಾನಿಕ ತತ್ವವನ್ನು ನಿರ್ಲಕ್ಷಿಸುತ್ತದೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಸುಪ್ರೀಂ ಕೋರ್ಟ್ ಮುಂದೆ ಈ ತೀರ್ಪನ್ನು ಪ್ರಶ್ನಿಸುವ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಕಮಲ್ ಮೌಲಾ ಮಸೀದಿ ಸಮಿತಿಗೆ ಸಾಧ್ಯವಿರುವ ಎಲ್ಲ ಕಾನೂನು ಸಹಾಯವನ್ನು ಒದಗಿಸಲಿದೆ ಎಂದು ಡಾ.ಇಲ್ಯಾಸ್ ಹೇಳಿದರು.

