ನವದೆಹಲಿ: ಜಗತ್ತು ಪ್ರಸಕ್ತ ಹಲವಾರು ಮಹತ್ವದ ಸವಾಲುಗಳನ್ನು ಎದುರಿಸುತ್ತಿದ್ದು, ಪರಿಸ್ಥಿತಿಯು ಕ್ಷಿಪ್ರವಾಗಿ ಬದಲಾಗದೆ ಇದ್ದಲ್ಲಿ ಹಲವು ದಶಕಗಳಿಂದ ಸಾಧಿಸಿದ ಸಾಧನೆಗಳು ಕೊಚ್ಚಿಹೋಗಲಿವೆ ಹಾಗೂ ಜಗತ್ತಿನ ಜನಸಂಖ್ಯೆಯ ಅತಿ ದೊಡ್ಡ ವರ್ಗವೊಂದು ಬಡತನದಲ್ಲಿ ಮುಳುಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.
ಪಂಚರಾಷ್ಟ್ರ ಪ್ರವಾಸದ ಅಂಗವಾಗಿ ಶನಿವಾರ ನೆದರ್‌ಲ್ಯಾಂಡ್‌ಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಹೇಗ್‌ನಲ್ಲಿ ಸಾಮುದಾಯಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದರು.
ಕೋವಿಡ್-19 ಸಾಂಕ್ರಾಮಿಕ , ಪ್ರಸಕ್ತ ನಡೆಯುತ್ತಿರುವ ಮಿಲಿಟರಿ ಸಂಘರ್ಷಗಳು ಹಾಗೂ ಇಂಧನ ಕೊರತೆ ಸೇರಿದಂತೆ ಜಗತ್ತು ಹಿಂದೆಂದೂ ಇಲ್ಲಂದಂತಹ ಸರಣಿ ಸವಾಲುಗಳನ್ನು ಎದುರಿಸುತ್ತಾ ಬಂದಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಈ ಸವಾಲುಗಳನ್ನು ತ್ವರಿತವಾಗಿ ನಿಭಾಯಿಸಲು ವಿಫಲವಾದಲ್ಲಿ ಜಗತ್ತು ಸಾಧಿಸಿದ ಅಭಿವೃದ್ಧಿಯ ಪ್ರಯೋಜನಗಳು ತಿರುವುಮುರುವಾಗಲಿವೆ ಹಾಗೂ ಜಗತ್ತಿನ ಭಾರೀ ದೊಡ್ಡ ಸಂಖ್ಯೆಯ ಜನರು ಬಡತನದೆಡೆಗೆ ತಳ್ಳಲ್ಪಡಲಿದ್ದಾರೆ ಎಂದು ಮೋದಿ ಹೇಳಿದರು.
ಜಾಗತಿಕ ಇಂಧನ ಮಾರುಕಟ್ಟೆ ಭಾರೀ ಒತ್ತಡವನ್ನು ಎದುರಿಸುತ್ತಿದ್ದು, ಇದು ಕೇವಲ ಆರ್ಥಿಕ ಸಮಸ್ಯೆಯಲ್ಲದೆ ಮಾನವೀಯ ಕಳಕಳಿಯ ವಿಚಾರವೂ ಆಗಿದೆ. ಜಾಗತಿಕವಾಗಿ ಇಂಧನ ಬೆಲೆಗಳ ಏರಿಳಿತಗಳು ಅಭಿವೃದ್ಧಿಶೀಲ ದೇಶಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ.
ತೈಲ ಹಾಗೂ ಅನಿಲ ಬೆಲೆಯೇರಿಕೆಗಳು ಸಾರಿಗೆ, ಆಹಾರ ಪೂರೈಕೆ, ಉತ್ಪಾದನೆ ಹಾಗೂ ಗೃಹ ಖರ್ಚುಗಳ ಮೇಲೂ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಇಂಧನ ಮೂಲಗಳನ್ನು ವೈವಿಧ್ಯಗೊಳಿಸುವುದು ಹಾಗೂ ಇಂಧನ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಕೆಲವೇ ಪ್ರದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವ ಅಗತ್ಯವಿರುವುದಾಗಿ ಪ್ರಧಾನಿ ಈ ಸಂದರ್ಭದಲ್ಲಿ ಕರೆ ನೀಡಿದರು.
''ಮಾನವಕುಲವು ಇಂದು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಮೊದಲಿಗೆ ಕೊರೋನಾ ವೈರಸ್ ಬಂತು, ಆನಂತರ ಯುದ್ಧಗಳು ಭುಗಿಲೆದ್ದವು ಮತ್ತು ಇದೀಗ ಇಂಧನ ಬಿಕ್ಕಟ್ಟು ಉದ್ಭವಿಸಿದೆ. ಈ ದಶಕವು ಜಗತ್ತಿನ ಪಾಲಿಗೆ ವಿಪತ್ತುಗಳ ದಶಕವಾಗಿ ಪರಿಣಮಿಸಿದೆ''. - ಪ್ರಧಾನಿ ನರೇಂದ್ರ ಮೋದಿ

