ಹೈದರಾಬಾದ್: ಪಶ್ಚಿಮ ಏಶ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ವಿವೇಚನೆಯಿಂದ ಬಳಸುವುದು ಅನಿವಾರ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದರು.
ತೆಲಂಗಾಣದಲ್ಲಿ 9,400 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ವರ್ಚುವಲ್ ಮೂಲಕ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ವಿದೇಶಗಳಿಂದ ಆಮದು ಮಾಡಿಕೊಳ್ಳುವ ಪೆಟ್ರೋಲಿಯಂ ಉತ್ಪನ್ನಗಳನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸಬೇಕು ಎಂದು ಜನರಿಗೆ ಸಲಹೆ ನೀಡಿದರು.
'ಇದರಿಂದ ಕೇವಲ ವಿದೇಶಿ ವಿನಿಮಯ ಉಳಿತಾಯವಾಗುವುದಲ್ಲ, ಯುದ್ಧ ಪರಿಸ್ಥಿತಿಯಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನೂ ತಗ್ಗಿಸಲು ಸಾಧ್ಯವಾಗಲಿದೆ' ಎಂದು ಹೇಳಿದರು.
ಕಳೆದ ಕೆಲವು ವರ್ಷಗಳಲ್ಲಿ ಭಾರತವು ಸೌರ ವಿದ್ಯುತ್ ಉತ್ಪಾದನೆಯಲ್ಲಿ ವಿಶ್ವದ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಪೆಟ್ರೋಲ್‌ಗೆ ಎಥನಾಲ್ ಮಿಶ್ರಣ ಮಾಡುವ ಕ್ಷೇತ್ರದಲ್ಲೂ ದೇಶವು ಗಮನಾರ್ಹ ಸಾಧನೆ ಮಾಡಿದೆ ಎಂದು ಮೋದಿ ತಿಳಿಸಿದರು.
ಶೇ 100ರಷ್ಟು ಎಲ್‌ಪಿಜಿ ಬಳಕೆದಾರರನ್ನು ತಲುಪುವ ಗುರಿಯೊಂದಿಗೆ ಕಾರ್ಯನಿರ್ವಹಿಸಿದ್ದ ಕೇಂದ್ರ ಸರ್ಕಾರ, ಇದೀಗ ಕೊಳವೆ ಮಾರ್ಗದ ಮೂಲಕ ಅಗ್ಗದ ದರದಲ್ಲಿ ಅನಿಲ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.
ಸಿಎನ್‌ಜಿ ಆಧಾರಿತ ವ್ಯವಸ್ಥೆಯನ್ನೂ ಸರ್ಕಾರ ಉತ್ತೇಜಿಸುತ್ತಿದ್ದು, ಈ ಎಲ್ಲ ಕ್ರಮಗಳಿಂದ ವಿಶ್ವದ ಅತಿ ದೊಡ್ಡ ಇಂಧನ ಬಿಕ್ಕಟ್ಟನ್ನೂ ಭಾರತ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಹೇಳಿದರು.
'ಆದರೆ ಇಂದಿನ ಅಗತ್ಯವೇನೆಂದರೆ, ಪೆಟ್ರೋಲ್, ಡೀಸೆಲ್, ಅನಿಲ ಹಾಗೂ ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಅತ್ಯಂತ ವಿವೇಚನೆಯಿಂದ ಬಳಸುವುದು. ಅಗತ್ಯವಿರುವಷ್ಟರ ಮಟ್ಟಿಗೆ ಮಾತ್ರ ಆಮದು ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸಬೇಕಿದೆ' ಎಂದು ಪ್ರಧಾನಿ ಸಲಹೆ ನೀಡಿದರು.

