ನವದೆಹಲಿ: ವಿಮಾನ ಇಂಧನ ದರ ಏರಿಕೆ ಮತ್ತು ಕೆಲವು ಪ್ರದೇಶಗಳ ಮೇಲೆ ವಿಧಿಸಲಾಗಿರುವ ವೈಮಾನಿಕ ವಲಯದ ನಿರ್ಬಂಧಗಳನ್ನು ಉಲ್ಲೇಖಿಸಿರುವ ಏರ್ ಇಂಡಿಯಾ ಸಂಸ್ಥೆಯು, ಜೂನ್‌ನಿಂದ ಆಗಸ್ಟ್‌ವರೆಗೆ ಹಲವು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ತನ್ನ ಸೇವೆಯನ್ನು ತಾತ್ಕಾಲಿಕವಾಗಿ ಕಡಿತಗೊಳಿಸುವುದಾಗಿ ಘೋಷಿಸಿದೆ.
'ಕಾರ್ಯಾಚರಣೆ ಸ್ಥಿರತೆಯನ್ನು ಸುಧಾರಿಸುವುದು ಮತ್ತು ಪ್ರಯಾಣಿಕರಿಗೆ ಕೊನೆಯ ಕ್ಷಣದಲ್ಲಿ ಆಗುವ ಅನಾನುಕೂಲತೆಯನ್ನು ತಪ್ಪಿಸುವುದು ಈ ಕ್ರಮದ ಉದ್ದೇಶವಾಗಿದೆ' ಎಂದು ಏರ್ ಇಂಡಿಯಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಟಾಟಾ ಸಮೂಹದ ಏರ್ ಇಂಡಿಯಾ ಸಂಸ್ಥೆಯು, ವಿಮಾನಗಳ ಸಂಖ್ಯೆ ಕಡಿತದ ಹೊರತಾಗಿಯೂ ಐದು ಖಂಡಗಳಾದ್ಯಂತ ಸಂಪರ್ಕವನ್ನು ಕಾಯ್ದುಕೊಳ್ಳಲಿದ್ದು, ಪ್ರತಿ ತಿಂಗಳು 1,200ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿಮಾನಗಳನ್ನು ಚಲಾಯಿಸುವುದಾಗಿ ಹೇಳಿದೆ.
ವಿಮಾನಗಳನ್ನು ಕಡಿತಗೊಳಿಸಲು ಕಾರಣವೇನು?
'ಕಾರ್ಯಾಚರಣೆ ಮತ್ತು ವಾಣಿಜ್ಯ ಸವಾಲುಗಳ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು ಏರ್ ಇಂಡಿಯಾ ಸಂಸ್ಥೆ ತಿಳಿಸಿದೆ.
'ಕೆಲವು ಪ್ರದೇಶಗಳ ಮೇಲಿನ ವೈಮಾನಿಕ ನಿರ್ಬಂಧಗಳು ಮತ್ತು ಅಂತರರಾಷ್ಟ್ರೀಯ ಕಾರ್ಯಾಚರಣೆಗೆ ತಗುಲುವ ದಾಖಲೆ ಮಟ್ಟದ ಜೆಟ್ ಇಂಧನ ಬೆಲೆಗಳು ಕೆಲವು ನಿರ್ದಿಷ್ಟ ಸೇವೆಗಳ ವಾಣಿಜ್ಯ ಕಾರ್ಯಸಾಧ್ಯತೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿವೆ' ಎಂದು ಸಂಸ್ಥೆ ಹೇಳಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕಾರ್ಯಾಚರಣೆಯಲ್ಲಿ ಮತ್ತಷ್ಟು ಬದಲಾವಣೆ ಮಾಡಲಾಗುವುದು ಎಂದೂ ತಿಳಿಸಿದೆ.
ಯಾವ ಮಾರ್ಗಗಳ ಮೇಲೆ ಪರಿಣಾಮ?
ಉತ್ತರ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ, ಆಗ್ನೇಯ ಏಷ್ಯಾ ಮತ್ತು ನೆರೆಯ ದಕ್ಷಿಣ ಏಷ್ಯಾದ ದೇಶಗಳ ಹಲವಾರು ಮಾರ್ಗಗಳಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಅಥವಾ ವಿಮಾನಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ.
ದೆಹಲಿ-ಚಿಕಾಗೊ, ಮುಂಬೈ-ನ್ಯೂಯಾರ್ಕ್, ದೆಹಲಿ-ಶಾಂಘೈ, ಚೆನ್ನೈ-ಸಿಂಗಪುರ, ಮುಂಬೈ-ಢಾಕಾ ಮತ್ತು ದೆಹಲಿ-ಮಾಲೆ ಮಾರ್ಗಗಳಲ್ಲಿ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತಿದೆ ಎಂದು ಘೋಷಿಸಿದೆ.
ಏರ್ ಇಂಡಿಯಾದ ಬಹುತೇಕ ಎಲ್ಲಾ ವಿಮಾನಗಳು ಎಂದಿನಂತೆ ಸಂಚರಿಸಲಿವೆ. ಆದರೆ, ಕೆಲವು ಮಾರ್ಗಗಳನ್ನು ಬಿಟ್ಟರೆ ಉಳಿದ ಕಡೆ ವಿಮಾನ ಸ್ಥಗಿತ ಇರುವುದಿಲ್ಲ. ಏರ್ ಇಂಡಿಯಾ ಒಂದು ತಿಂಗಳಲ್ಲಿ 1,200ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿಮಾನಗಳನ್ನು ಚಲಾಯಿಸುತ್ತದೆ. ಇದರಲ್ಲಿ ಉತ್ತರ ಅಮೆರಿಕಕ್ಕೆ ವಾರಕ್ಕೊಮ್ಮೆ 33 ವಿಮಾನ, ಯೂರೋಪ್ಗೆ 47 ವಿಮಾನ, ಯುಕೆಗೆ 57 ವಿಮಾನ, ಪೂರ್ವ ಏಷ್ಯಾಗೆ 158 ವಿಮಾನ, ಆಸ್ಟ್ರೇಲಿಯಾಗೆ 8 ವಿಮಾನ, ಆಫ್ರಿಕಾಗೆ 7 ವಿಮಾನಗಳನ್ನು ಆಪರೇಟ್ ಮಾಡುತ್ತಿದೆ. ಬಹುತೇಕ ಇವೆಲ್ಲವೂ ಹಾಗೇ ಮುಂದುವರಿಯುತ್ತವೆ.
ಟಿಕೆಟ್ ಕಾಯ್ದಿರಿಸಿದವರ ಕಥೆಯೇನು?
ವಿಮಾನ ಸ್ಥಗಿತದಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ಸಾಧ್ಯವಿರುವ ಕಡೆ ಪರ್ಯಾಯ ಪ್ರಯಾಣದ ವ್ಯವಸ್ಥೆ ಮಾಡಲಾಗುವುದು ಎಂದು ಏರ್ ಇಂಡಿಯಾ ತಿಳಿಸಿದೆ.
ಏರ್ ಇಂಡಿಯಾದ ಪರ್ಯಾಯ ವಿಮಾನಗಳಲ್ಲಿ ಮರು-ವಸತಿ, ಉಚಿತವಾಗಿ ಪ್ರಯಾಣದ ದಿನಾಂಕ ಬದಲಾವಣೆ, ಸಂದರ್ಭಕ್ಕೆ ಅನುಗುಣವಾಗಿ ಪೂರ್ಣ ಹಣ ಮರುಪಾವತಿ, ಸಹಾಯಕ್ಕಾಗಿ ಪ್ರಯಾಣಿಕರು ಸಂಸ್ಥೆಯ 24x7 ಸಂಪರ್ಕ ಕೇಂದ್ರ ಅಥವಾ ಡಿಜಿಟಲ್ ಚಾನಲ್‌ಗಳನ್ನು ಸಂಪರ್ಕಿಸಬಹುದು ಎಂದೂ ಸಂಸ್ಥೆ ಪ್ರಕಟಣೆಯಲ್ಲಿ ತಳಿಸಿದೆ.

