ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಉದ್ವಿಗ್ನತೆ ನಡುವೆ ಭಾರತದ ಎರಡು ಹಡಗುಗಳು ಹೊರ್ಮುಜ್ ಜಲಸಂಧಿಯನ್ನು ದಾಟಿದ್ದು, ಕಾರ್ಯತಂತ್ರದ ಹಡಗು ಕಾರಿಡಾರ್ ಬಳಿ ಭಾರತ ಧ್ವಜ ಇದ್ದ ಮತ್ತೊಂದು ಹಡಗಿನ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್‌ಪಿಜಿ ಟ್ಯಾಂಕರ್ ಇದ್ದ 'ಸಿಮಿ'ಹಡಗು ಇದೇ 13ರಂದು ಜಲಸಂಧಿ ದಾಟಿದರೆ, ಎನ್.ವಿ. ಸಮ್‌ಶೈನ್ ಹಡಗು ಇಂದು(ಮೇ 14) ಜಲಸಂಧಿಯನ್ನು ದಾಟಿದೆ. ಈ ಮೂಲಕ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ಆರಂಭವಾಗಿ ಜಲಸಂಧಿಗೆ ದಿಗ್ಬಂಧನ ಹಾಕಿದ ಬಳಿಕ ಭಾರತದ 13 ಹಡಗುಗಳು ಜಲಸಂಧಿಯನ್ನು ದಾಟಿವೆ.
ಈ ಮಧ್ಯೆ ಸೊಮಾಲಿಯಾದಿಂದ ಯುಎಇಯ ಶಾರ್ಜಾಗೆ ಪ್ರಯಾಣಿಸುತ್ತಿದ್ದ 'ಇಂಡಿಯನ್ ಧೌ' ಅಥವಾ ಯಾಂತ್ರಿಕೃತ ನೌಕಾಯಾನ ಹಡಗು (ಎಂಎಸ್‌ವಿ) 'ಹಾಜಿ ಅಲಿ' ಬುಧವಾರ ಮುಂಜಾನೆ ಒಮಾನ್ ಜಲಪ್ರದೇಶದಲ್ಲಿ ಗುಂಡಿನ ದಾಳಿಗೆ ಒಳಗಾಗಿದೆ. ಪರಿಣಾಮವಾಗಿ ಮರದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡು ಅದು ಮುಳುಗಿದೆ ಎಂದು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮುಖೇಶ್ ಮಂಗಲ್ ಹೇಳಿದ್ದಾರೆ.
'ಹಾಜಿ ಅಲಿ' ಹಡಗಿನಲ್ಲಿದ್ದ ಎಲ್ಲ 14 ಸಿಬ್ಬಂದಿಯನ್ನು ಒಮಾನ್ ಕೋಸ್ಟ್ ಗಾರ್ಡ್ ಸುರಕ್ಷಿತವಾಗಿ ರಕ್ಷಿಸಿದೆ. ಅವರು ಒಮಾನ್‌ನ ದಿಬ್ಬಾ ಬಂದರನ್ನು ತಲುಪಿದ್ದಾರೆ. ಸಿಬ್ಬಂದಿ ಸುರಕ್ಷಿತರಾಗಿದ್ದಾರೆಂದು ವರದಿಯಾಗಿದೆ' ಎಂದೂ ಅಧಿಕಾರಿ ತಿಳಿಸಿದ್ದಾರೆ.
ಭಾರತೀಯ ಅಧಿಕಾರಿಗಳು ಒಮಾನ್ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದೂ ತಿಳಿಸಿದ್ದಾರೆ.
'ಇಂಡಿಯನ್ ಧೌ' ಎಂಬುದು ಮರದಿಂದ ತಯಾರಿಸಿದ, ಒಂದು ಅಥವಾ ಹೆಚ್ಚಿನ ಮಾಸ್ಟ್‌ಗಳು ಮತ್ತು ವಿಶಿಷ್ಟವಾದ ಲ್ಯಾಟೆನ್(ತ್ರಿಕೋನ) ಹಾಯಿಗಳನ್ನು ಹೊಂದಿರುವ ಸಾಂಪ್ರದಾಯಿಕ ನೌಕಾಯಾನ ಹಡಗಾಗಿದೆ. ಈ ರೀತಿಯ ಹಡಗುಗಳನ್ನು ಶತಮಾನಗಳಿಂದ ಹಿಂದೂ ಮಹಾಸಾಗರದಲ್ಲಿ ಕಡಲ ವ್ಯಾಪಾರಕ್ಕೆ ಬಳಸಲಾಗುತ್ತಿದೆ.
ಮುಳುಗಿದ ಹಡಗು 57 ಮೀಟರ್ ಉದ್ದ ಮತ್ತು 14 ಮೀಟರ್ ಅಗಲವಿತ್ತು ಎಂದು ಅಧಿಕಾರಿ ಹೇಳಿದ್ದಾರೆ.
ಈ ದಾಳಿಯನ್ನು ಖಂಡಿಸಿರುವ ವಿದೇಶಾಂಗ ಸಚಿವಾಲಯವು, ಯಾರು ದಾಳಿ ನಡೆಸಿದರು ಎಂಬ ಬಗ್ಗೆ ತಿಳಿದುಬಂದಿಲ್ಲ ಎಂದು ಹೇಳಿದೆ.

