ಇಂದೋರ್: ಭೋಜಶಾಲೆಯನ್ನು ಹಿಂದೂ ದೇವಾಲಯ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ ನಂತರ, ಆ ದೇವಾಲಯದ ಮೂಲ ವಾಗ್ದೇವಿ (ಸರಸ್ವತಿ) ಪ್ರತಿಮೆಯನ್ನು ಲಂಡನ್ ಮ್ಯೂಸಿಯಂನಿಂದ ಭಾರತಕ್ಕೆ ತರಬೇಕೆಂಬ ಒತ್ತಾಯ ಕೇಳಿಬಂದಿದೆ.
ಲಂಡನ್‌ನ ಬ್ರಿಟಿಷ್ ವಸ್ತು ಸಂಗ್ರಹಾಲಯದಲ್ಲಿರುವ ವಾಗ್ದೇವಿ ವಿಗ್ರಹವು ಕೊಹಿನೂರು ವಜ್ರಕ್ಕಿಂತ ಮುಖ್ಯವಾದದು.
ಆ ಮೂಲ ವಿಗ್ರಹವನ್ನು ತಂದು, ಭೋಜಶಾಲಾದಲ್ಲಿ ಮರುಸ್ಥಾಪಿಸುವಂತೆ ಹಿಂದೂ ಸಮುದಾಯದ ಅರ್ಜಿದಾರರು ಒತ್ತಾಯಿಸಿದ್ದಾರೆ.
ಅರ್ಜಿದಾರರಲ್ಲಿ ಒಬ್ಬರಾದ ಕುಲದೀಪ್ ತಿವಾರಿ, 'ಲಂಡನ್‌ನಿಂದ ವಿಗ್ರಹವನ್ನು ಹಿಂದಿರುಗಿಸುವಂತೆ ಕೋರಿ ಕೇಂದ್ರ, ಎಎಸ್‌ಐ ಮತ್ತು ಮಧ್ಯಪ್ರದೇಶ ಸರ್ಕಾರಕ್ಕೆ ಹೊಸ ಮನವಿಗಳನ್ನು ಸಲ್ಲಿಸಲಾಗಿದೆ' ಎಂದು ಮಂಗಳವಾರ ತಿಳಿಸಿದರು.
ವಿವಾದಿತ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣವು ಸರಸ್ವತಿ ದೇವಾಲಯವಾಗಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಮೇ 15ರಂದು ತೀರ್ಪು ನೀಡಿತು. ಅದೇ ಸಮಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಶುಕ್ರವಾರ ನಮಾಜ್ ಸಲ್ಲಿಸಲು ಅವಕಾಶ ನೀಡಿದ್ದ ಎಎಸ್‌ಐ ಆದೇಶವನ್ನು ರದ್ದುಗೊಳಿಸಿತು.
ಕೋರ್ಟ್ ತೀರ್ಪಿನ ನಂತರ, ಹಿಂದೂ ಸಮುದಾಯದ ಸದಸ್ಯರು ಎಎಸ್‌ಐ -ಸಂರಕ್ಷಿತ ಸ್ಮಾರಕದಲ್ಲಿ ಸರಸ್ವತಿ ವಿಗ್ರಹದ ಪ್ರತಿಕೃತಿಯನ್ನು ಸ್ಥಾಪಿಸಿ, ನಂತರ ಪ್ರಾರ್ಥನೆ ಸಲ್ಲಿಸಲು ಪ್ರಾರಂಭಿಸಿದರು.

