ನವದೆಹಲಿ: ನಟ ರಣವೀರ್ ಸಿಂಗ್ ಅಭಿನಯದ 'ದುರಂಧರ್- ದಿ ರಿವೇಂಜ್' ಸಿನಿಮಾ ಕುರಿತಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ಬಗ್ಗೆ ಗಮನಹರಿಸುವಂತೆ ಕೇಂದ್ರ ಸರ್ಕಾರ ಹಾಗೂ ಸೆನ್ಸಾರ್ ಮಂಡಳಿಗೆ ದೆಹಲಿ ಹೈಕೋರ್ಟ್ ಬುಧವಾರ ಸೂಚಿಸಿದೆ.
'ದುರಂಧರ್- ದಿ ರಿವೇಂಜ್'ನಲ್ಲಿ ದೇಶದ ಗುಪ್ತಚರ ವ್ಯವಸ್ಥೆ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದ ಕೆಲ ಸೂಕ್ಷ್ಮ ವಿಚಾರಗಳನ್ನು ಬಹಿರಂಗಪಡಿಸಲಾಗಿದೆ ಎಂದು ಆರೋಪಿಸಿ ಎಸ್‌ಎಸ್‌ಬಿ ಸಿಬ್ಬಂದಿಯೊಬ್ಬರು ಈ ಪಿಐಎಲ್ ಸಲ್ಲಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಧ್ಯಾಯ ಹಾಗೂ ನ್ಯಾ.ತೇಜಸ್ ಕಾರಿಯಾ ಅವರನ್ನೊಳಗೊಂಡ ಪೀಠವು ಅರ್ಜಿಯ ವಿಚಾರಣೆ ನಡೆಸಿದ್ದು, 'ಅರ್ಜಿದಾರರ ಕಳವಳವನ್ನು ನಿರೂಪಿಸುವಂತಹ ಯಾವುದೇ ಅಂಶಗಳು ಇಲ್ಲ. ಸಿನಿಮಾವನ್ನು ಮನರಂಜನೆಗಾಗಿ ಮಾಡಲಾಗಿದೆ ಎಂಬುದು ನಿಜವಾಗಿದ್ದರೂ, ಅದು ಬೀರುವ ಪ್ರಭಾವವನ್ನು ತಳ್ಳಿಹಾಕಲಾಗದು. ಹೀಗಾಗಿ ಸೆನ್ಸಾರ್ ಮಂಡಳಿ ಮತ್ತು ಕೇಂದ್ರ ಈ ನಿಟ್ಟಿನಲ್ಲಿ ಸೂಕ್ತ ನಿರ್ಣಯ ತೆಗದುಕೊಳ್ಳಬೇಕು' ಎಂದಿದೆ.
ಅರ್ಜಿದಾರರ ವಾದವೇನು?
ಚಲನಚಿತ್ರದಲ್ಲಿ ಸೇನಾ ಕಾರ್ಯಾಚರಣೆಗಳು, ಸೂಕ್ಷ್ಮ ಪ್ರದೇಶಗಳು ಮತ್ತು ಏಜೆಂಟರ ಬಗ್ಗೆ ಆಳವಾದ ಮಾಹಿತಿಗಳನ್ನು ಬಹಿರಂಗಪಡಿಸಲಾಗಿದೆ. ಇದು ರಹಸ್ಯ ಕಾಯ್ದೆಯ ಸಂಪೂರ್ಣ ಉಲ್ಲಂಘನೆಯಾಗಿದೆ. ಕೆಲವು ದೃಶ್ಯಗಳಂತೂ ದೇಶದ ಭದ್ರತೆಯ ಹಿತಾಸಕ್ತಿಗೆ ಧಕ್ಕೆ ತರುವಂತಹ ಮಾಹಿತಿಯನ್ನು ಬಹಿರಂಗಪಡಿಸಿವೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಚಿತ್ರದಲ್ಲಿನ ಪಾತ್ರಗಳನ್ನು ನೈಜ ಪಾತ್ರಕ್ಕೆ ಹೊಂದುವಂತೆ ಸೃಷ್ಟಿಸಲಾಗಿದೆ. ಇದು ದೇಶದ ಹಿತಾಸಕ್ತಿಗೆ ಒಳ್ಳೆಯದಲ್ಲ. ಕೆಲವು ಯಶಸ್ವಿ ಸೇನಾ ಕಾರ್ಯಾಚರಣೆಗಳನ್ನು ಸಹ ಚಿತ್ರದಲ್ಲಿ ಮರುಸೃಷ್ಟಿಸಲಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಸಿನಿಮಾಗಳಲ್ಲಿ ಸೇನೆಯ ಸೂಕ್ಷ್ಮ ವಿಚಾರಗಳನ್ನು ಬಹಿರಂಗಪಡಿಸುವುದನ್ನು ತಡೆಯಲು ಪ್ರೋಟೊಕಾಲ್ ಅನ್ನು ರೂಪಿಸಬೇಕು ಮತ್ತು 'ಧುರಂಧರ್: ದಿ ರಿವೆಂಜ್' ಚಿತ್ರಕ್ಕೆ ನೀಡಿರುವ ಪ್ರಮಾಣಪತ್ರವನ್ನು ರದ್ದುಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಅಲ್ಲದೆ, ಚಿತ್ರಮಂದಿರ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಚಿತ್ರದ ಪ್ರಸಾರಕ್ಕೆ ತಡೆಯಾಜ್ಞೆ ನೀಡುವಂತೆಯೂ ಅರ್ಜಿಯಲ್ಲಿ ಕೋರಿದ್ದಾರೆ.

