ನವದೆಹಲಿ: ಸಿಬಿಎಸ್‌ಐ 12ನೇ ತರಗತಿ ಪರೀಕ್ಷೆಗಳ ಮರುಮೌಲ್ಯಮಾಪನ ಮತ್ತು ಉತ್ತರ ಪತ್ರಿಕೆ ಪರಿಶೀಲನಾ ಶುಲ್ಕವನ್ನು ಪ್ರತಿ ಪತ್ರಿಕೆಗೆ ₹100ಕ್ಕೆ ಇಳಿಸಲಾಗಿದೆ ಎಂದು ಶಿಕ್ಷಣ ಸಚಿವಾಲಯ ಪ್ರಕಟಿಸಿದೆ.
ಲ್ಲಿ ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ವ್ಯವಸ್ಥೆ ಅಳವಡಿಸಿರುವುದರಿಂದ ವಿದ್ಯಾರ್ಥಿಗಳ ಅಂಕಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ವಿದ್ಯಾರ್ಥಿಗಳ ಕಳವಳವನ್ನು ಕೂಡ ಸಚಿವಾಲಯ ತಳ್ಳಿಹಾಕಿದೆ.
ಒಎಸ್‌ಎಂ ಎಂದರೆ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಕಂಪ್ಯೂಟರ್ ಪರದೆಯ ಮೇಲೆ ಡಿಜಿಟಲ್ ರೂಪದಲ್ಲಿ ಮೌಲ್ಯಮಾಪನ ಮಾಡುವ ವಿಧಾನ. ಇದರಲ್ಲಿ ಮೌಲ್ಯಮಾಪಕರು ಕಂಪ್ಯೂಟರ್ ಬಳಸಿ ಅಂಕಗಳನ್ನು ನೀಡುತ್ತಾರೆ.
ಒಎಸ್‌ಎಂ ವ್ಯವಸ್ಥೆಯಿಂದ ಅಂಕಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವಿದ್ಯಾರ್ಥಿಗಳು ಆತಂಕಪಟ್ಟಿದ್ದರು. ವಿದ್ಯಾರ್ಥಿಗಳ ಆತಂಕವನ್ನು ಕಡಿಮೆ ಮಾಡಲು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮರುಮೌಲ್ಯಮಾಪನ ಮತ್ತು ಉತ್ತರ ಪತ್ರಿಕೆ ಪರಿಶೀಲನಾ ಶುಲ್ಕವನ್ನು ಕಡಿಮೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಒಎಸ್‌ಎಂ ವ್ಯವಸ್ಥೆಯು ಪಾರದರ್ಶಕ ಮೌಲ್ಯಮಾಪನ ನಡೆಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಅನುಸರಿಸುತ್ತಿರುವ ವಿಧಾನವಾಗಿದೆ' ಎಂದು ಅವರು ಸಮರ್ಥಿಸಿಕೊಂಡರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಕಾರ್ಯದರ್ಶಿ ಸಂಜಯ್ ಕುಮಾರ, 'ಮೂರು ಹಂತದ ಭದ್ರತಾ ವ್ಯವಸ್ಥೆಗಳನ್ನು ಅನುಸರಿಸಿ 12ನೇ ತರಗತಿಯ ಉತ್ತರ ಪತ್ರಿಕೆಗಳ 98 ಲಕ್ಷ ಹಾಳೆಗಳನ್ನು ಸ್ಕ್ಯಾನ್ ಮಾಡಲಾಗಿದೆ. ಪದೇ ಪದೇ ಸ್ಕ್ಯಾನಿಂಗ್ ಮಾಡಿದರೂ, ಕೆಲವು ಉತ್ತರ ಪತ್ರಿಕೆಗಳಲ್ಲಿ ಸ್ಪಷ್ಟತೆಯ ಸಮಸ್ಯೆ ಇತ್ತು. ಅದಕ್ಕೆ ಕಾರಣ, ಉತ್ತರ ಪತ್ರಿಕೆಗಳಲ್ಲಿ ಬಳಸಿದ್ದ ಶಾಯಿ ತಿಳಿ ಬಣ್ಣದ್ದಾಗಿತ್ತು. ಸ್ಕ್ಯಾನಿಂಗ್ ನಂತರವೂ ಉತ್ತರ ಪತ್ರಿಕೆಗಳಲ್ಲಿ ಸ್ಕ್ರಿಪ್ಟ್‌ಗಳು ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ' ಎಂದು ಹೇಳಿದರು.
'ಇಂಥ ಸಂದರ್ಭಗಳಲ್ಲಿ, ಪರೀಕ್ಷಕರಿಗೆ ಉತ್ತರ ಪತ್ರಿಕೆಗಳನ್ನು ಕೈಯಿಂದಲೇ ಮೌಲ್ಯಮಾಪನ ಮಾಡಿ ಅದಕ್ಕೆ ಅನುಗುಣವಾಗಿ ಅಂಕಗಳನ್ನು ನೀಡುವಂತೆ ಸೂಚಿಸಲಾಯಿತು. ಅಂತಹ 13,000ಕ್ಕೂ ಹೆಚ್ಚು ಉತ್ತರ ಪತ್ರಿಕೆಗಳನ್ನು ಪ್ರತ್ಯೇಕವಾಗಿ ಗುರುತಿಸಿ, ಕೈಯಿಂದಲೇ ಪರಿಶೀಲಿಸಲಾಯಿತು. ಈ ಮೌಲ್ಯಮಾಪನದ ನಂತರ ಪಡೆದ ಅಂಕಗಳನ್ನು ನಮೂದಿಸಲಾಯಿತು' ಎಂದು ಅವರು ವಿವರಿಸಿದರು.
'ಭದ್ರತಾ ವ್ಯವಸ್ಥೆ ಮತ್ತು ಸಂಬಂಧಿತ ಸಮಸ್ಯೆಗಳಿಗೆ ವಿಶೇಷ ಗಮನ ನೀಡಲಾಯಿತು. ಇದರಿಂದಾಗಿ ಆನ್ ಸ್ಕ್ರೀನ್ ಮಾರ್ಕಿಂಗ್ ಮೂಲಕ ನಡೆಸಿದ ಮೌಲ್ಯಮಾಪನವು ನಿಖರ, ಸಂಪೂರ್ಣ ಪಾರದರ್ಶಕ ಮತ್ತು ನ್ಯಾಯಯುತವಾಗಿ ನಡೆಯಲು ಸಾಧ್ಯವಾಯಿತು' ಎಂದು ಅವರು ತಿಳಿಸಿದರು.
'ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳನ್ನು ವೀಕ್ಷಿಸಲು ಬಯಸಿದರೆ, ಅವರು ಪ್ರತಿ ಪತ್ರಿಕೆಗೆ ₹700 ಬದಲಿಗೆ ₹100 ಶುಲ್ಕ ಪಾವತಿಸಬೇಕು. ಉತ್ತರ ಪತ್ರಿಕೆಯ ಪರಿಶೀಲನೆ ಅಥವಾ ಮರು ಮೌಲ್ಯಮಾಪನ ಮಾಡಲು ಬಯಸಿದರೆ, ಅದಕ್ಕೂ ಪ್ರತಿ ಪತ್ರಿಕೆಗೆ ₹500 ಬದಲಿಗೆ ₹100 ಪಾವತಿಸಬೇಕು. ಯಾವುದೇ ನಿರ್ದಿಷ್ಟ ಉತ್ತರವನ್ನು ಮರು ಪರಿಶೀಲಿಸಲು ಬಯಸಿದರೆ, ಶುಲ್ಕವು ಪ್ರತಿ ಪ್ರಶ್ನೆಗೆ ₹25 ಆಗುತ್ತದೆ' ಎಂದು ಕುಮಾರ್ ಹೇಳಿದರು.
'ಮರುಮೌಲ್ಯಮಾಪನದ ಸಮಯದಲ್ಲಿ, ವಿದ್ಯಾರ್ಥಿಯ ಅಂಕಗಳು ಹೆಚ್ಚಾದರೆ, ಮರುಮೌಲ್ಯಮಾಪನಕ್ಕಾಗಿ ಪಾವತಿಸಿದ ಮೊತ್ತವನ್ನು ವಿದ್ಯಾರ್ಥಿಗೆ ಮರುಪಾವತಿಸಲು ನಿರ್ಧರಿಸಿದ್ದೇವೆ' ಎಂದು ಅವರು ಹೇಳಿದರು.

