ಶ್ರೀನಗರ : ಭಯೋತ್ಪಾದಕ ಕೃತ್ಯ ಎಸಗಲು ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಿದ್ದ ನಿಷೇಧಿತ ಲಷ್ಕರ್ ಎ-ತಯಬಾ ಸಂಘಟನೆಯ ಉಗ್ರ, ಪಾಕಿಸ್ತಾನದ ಮಹಮ್ಮದ್ ಉಸ್ಮಾನ್ ಜಾಟ್, ತಾನು ಕೈಗೊಳ್ಳಬೇಕಿದ್ದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ, ಕೂದಲು ಕಸಿ ಮಾಡಿಸಿಕೊಂಡಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಉಸ್ಮಾನ್‌ನನ್ನು ಕಳೆದ ತಿಂಗಳು ಶ್ರೀನಗರ ಪೊಲೀಸರು ಬಂಧಿಸಿದ್ದಾರೆ.
'ಬಂಧಿತ ಉಗ್ರನನ್ನು 'ಚೀನೀಸ್' ಎಂದೂ ಕರೆಯಲಾಗುತ್ತಿತ್ತು. ವಿಚಾರಣೆ ಸಂದರ್ಭದಲ್ಲಿ ಉಸ್ಮಾನ್, 'ಭಯೋತ್ಪಾದನಾ ತರಬೇತಿ ಶಿಬಿರದಲ್ಲಿ ತಿಳಿಸಿಕೊಟ್ಟಿದ್ದಕ್ಕಿಂತ ಭಿನ್ನವಾದ ಜೀವನವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಕಂಡೆ. ಕೂದಲು ಕಸಿ ಕುರಿತು ತಿಳಿದು ಶ್ರೀನಗರದಲ್ಲಿರುವ ಕೇಂದ್ರಕ್ಕೆ ತೆರಳಿ, ಕಸಿ ಮಾಡಿಸಿಕೊಂಡೆ' ಎಂದು ತಿಳಿಸಿದ್ದಾನೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಕಣಿವೆಯ ಉತ್ತರ ಭಾಗದಲ್ಲಿ ದೇಶದ ಒಳನುಸುಳಿದ್ದೆ. ಅಲ್ಲಿಯೇ ನೆಲಸಿದ್ದೆ ಎಂದೂ ತಿಳಿಸಿದ್ದಾನೆ' ಎಂದಿದ್ದಾರೆ.
ಉಸ್ಮಾನ್ ದೇಶದಲ್ಲಿ ಸರಣಿ ದಾಳಿಗಳನ್ನು ನಡೆಸುವುದಕ್ಕಾಗಿ ತರಬೇತಿ ಪಡೆದು ಗಡಿ ಪ್ರವೇಶಿಸಿದ್ದ. ಉತ್ತರ ಮತ್ತು ಮಧ್ಯ ಕಾಶ್ಮೀರದಲ್ಲಿ ಹಲವು ಉಗ್ರ ಚಟುವಟಿಕೆಗಳಲ್ಲೂ ಭಾಗಿಯಾಗಿದ್ದ ಎಂದು ತಿಳಿಸಿದ್ದಾರೆ. ಪ್ರಕರಣದ ತನಿಖೆಯನ್ನು ಎನ್‌ಐಎ ನಡೆಸುತ್ತಿದೆ.

