ನವದೆಹಲಿ: ಸಾರ್ವಜನಿಕ ಸೇವಾ ವಾಹನಗಳಲ್ಲಿ ವಾಹನ ಸ್ಥಳ ಪಥ ಸಾಧನಗಳು (ವಿಎಲ್‌ಟಿಡಿ) ಹಾಗೂ ಪ್ಯಾನಿಕ್ ಬಟನ್‌ಗಳನ್ನು ಸಮಯಕ್ಕೆ ಅನುಗುಣವಾಗಿ ಮತ್ತು ಪರಿಶೀಲಿಸಬಹುದಾದ ರೀತಿಯಲ್ಲಿ ಅಳವಡಿಸಿರುವುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಶೇ 1ಕ್ಕಿಂತ ಕಡಿಮೆ ಸಾರಿಗೆ ವಾಹನಗಳು ವಿಎಲ್‌ಟಿಡಿ ಹೊಂದಿವೆ ಎಂಬುದು ಆತಂಕಕಾರಿ ಸಂಗತಿ. ಈ ಸಾಧನವು ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಲಿದೆ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ಹೇಳಿದೆ.
'ಕೇಂದ್ರ ಮೋಟಾರು ವಾಹನ ನಿಯಮಗಳು-1989'ರ (ಸಿಎಂವಿಆರ್) ಪೈಕಿ 125 'ಎಚ್' ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆದೇಶಿಸಿರುವ ನ್ಯಾಯಾಲಯವು, ವಿಎಲ್‌ಟಿಡಿ ಹಾಗೂ 'ಪ್ಯಾನಿಕ್ ಬಟನ್'ಗಳನ್ನು ಪರಿಶೀಲಿಸದೆ ಯಾವುದೇ ಸಾರ್ವಜನಿಕ ಸೇವಾ ವಾಹನಗಳಿಗೆ ಸೆಕ್ಷನ್ 56ರ ಅಡಿ ಫಿಟ್ನೆಸ್ ಪ್ರಮಾಣಪತ್ರ ಅಥವಾ ಎಂವಿ ಕಾಯ್ದೆಯ ಸೆಕ್ಷನ್ 66ರ ಅಡಿಯಲ್ಲಿ ಅನುಮತಿ ನೀಡಬಾರದು ಎಂದು ನಿರ್ದೇಶಿಸಿದೆ.
ಸಿಎಂವಿಆರ್‌ನ ನಿಯಮ 125 ಎಚ್‌ನ ಉದ್ದೇಶಕ್ಕೆ ಅನುಗುಣವಾಗಿ 2018ರ ಡಿ.31ರವರೆಗೆ ನೋಂದಾಯಿಸಲಾದ ಸಾರ್ವಜನಿಕ ಸೇವಾ ವಾಹನಗಳಲ್ಲಿ ವಿಎಲ್‌ಟಿಡಿಗಳು ಹಾಗೂ 'ಪ್ಯಾನಿಕ್ ಬಟನ್'ಗಳನ್ನು ಅಳವಡಿಸಿರುವುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡುತ್ತೇವೆ. ಇದು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲಿದೆ ಎಂದು ಪೀಠ ಹೇಳಿದೆ.
ಅಮಿಕಸ್ ಕ್ಯೂರಿ, ಹಿರಿಯ ವಕೀಲ ಗೌರವ್ ಅಗರ್ವಾಲ್ ನೀಡಿದ ಸಲಹೆ ಪರಿಗಣಿಸಿರುವ ನ್ಯಾಯಪೀಠವು ಈ ಆದೇಶವನ್ನು ನೀಡಿದೆ.

