ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್.. ಸದ್ಯ ಇಡೀ ಜಗತ್ತಿಗೆ ತನ್ನ ಚಂಚಲತೆ, ವಿಲಕ್ಷಣ ನಡವಳಿಕೆಯಿಂದ ಗೊಂದಲ ಸೃಷ್ಟಿಸಿರುವ ನಾಯಕ. ಒಂದೊಮ್ಮೆ ಯುದ್ಧವಿರಾಮ ಮತ್ತೊಮ್ಮೆ ಭೀಕರ ಯುದ್ಧದ ಕುರಿತಂತೆ ಮಾತನಾಡುವ ಈ ಹುಚ್ಚು ದೊರೆಯ ಆರ್ಥಿಕ ವ್ಯವಹಾರವೂ ಈಗ ಜಗತ್ತಿಗೆ ಅಚ್ಚರಿ ಮೂಡಿಸಿದೆ.
ಹೌದು ಅಧ್ಯಕ್ಷರಾಗಿ ಇದ್ದುಕೊಂಡೇ ಟ್ರಂಪ್, ಅಮೆರಿಕ ಷೇರುಪೇಟೆಯಲ್ಲಿ ಭಾರಿ ಪ್ರಮಾಣದ ಖರೀದಿ ಮತ್ತು ಮಾರಾಟ ವ್ಯವಹಾರ ನಡೆಸಿದ್ದಾರೆ. ಯುದ್ಧದ ವಾತಾವರಣ ಮತ್ತು ಸರ್ಕಾರದ ನೀತಿಗಳನ್ನು ಆಧರಿಸಿ ಅದರ ಪರಿಣಾಮದ ಮೂಲಕ ಲಾಭ ಮಾಡಿಕೊಂಡರೆ ಎಂಬ ಅನುಮಾನ ಮೂಡಿದೆ.
2026ರ ತ್ರೈಮಾಸಿಕದಲ್ಲಿ ಟ್ರಂಪ್ 3,700 ಟ್ರೇಡಿಂಗ್(ಖರೀದಿ ಮತ್ತು ಮಾರಾಟ) ನಡೆಸಿರುವುದು ಅವರೇ ಸಲ್ಲಿಸಿರುವ ಎಥಿಕ್ಸ್ ಫೈಲಿಂಗ್ ದಾಖಲೆಯಲ್ಲಿ ಕಂಡುಬಂದಿದೆ. ಎನ್ ವಿಡಿಯಾ, ಲಾಕ್ ಹೀಡ್, ಮೈಕ್ರೋಸಾಫ್ಟ್, ಬೋಯಿಂಗ್ ಮುಂತಾದ ಕಂಪನಿಗಳ ಷೇರು ಖರೀದಿ ಮತ್ತು ಮಾರಾಟವನ್ನು ಟ್ರಂಪ್ ಮಾಡಿದ್ದಾರೆ. ಅವರು ಷೇರು ವ್ಯವಹಾರ ನಡೆಸಿರುವ ಹಲವು ಕಂಪನಿಗಳು ರಕ್ಷಣೆ, ಚಿಪ್ ರಫ್ತು ಮತ್ತು ವ್ಯಾಪಾರ ಕುರಿತಾದ ಸರ್ಕಾರದ ನೀತಿಗಳಿಂದ ನೇರ ಪರಿಣಾಮ ಹೊಂದಿರುವ ಕಂಪನಿಗಳಾಗಿವೆ.
ಇಷ್ಟೆಲ್ಲ ಆದ ಮೇಲೆ ಹಿತಾಸಕ್ತಿ ಸಂಘರ್ಷದಲ್ಲಿ ಟ್ರಂಪ್ ಸಿಲುಕಿದ್ದಾರೆಯೇ? ಎಂಬ ಅನುಮಾನ ಮೂಡುವುದು ಸಹಜ. ಅಮೆರಿಕದಲ್ಲಿ ಇದಕ್ಕೊಂದು ಕಾನೂನು ಸಹ ಇದೆ. ಅಮೆರಿಕ ಹಿತಾಸಕ್ತಿ ಸಂಘರ್ಷ ಕಾನೂನಿನ ಅನ್ವಯ ಸರ್ಕಾರದ ನೀತಿಗಳು ಪರಿಣಾಮ ಬೀರುವ ಆರ್ಥಿಕ ವ್ಯವಹಾರಗಳಲ್ಲಿ ಭಾಗವಹಿಸದಂತೆ ಅಧಿಕಾರಿಗಳು, ಸಂಪುಟ ಸದಸ್ಯರಿಗೆ ನಿರ್ಬಂಧ ಹೇರಲಾಗಿದೆ. ಆದರೆ, ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಇದರಿಂದ ವಿನಾಯಿತಿ ಇದೆ. ಅಧ್ಯಕ್ಷರ ಅಧಿಕಾರವು ಎಲ್ಲ ವಲಯಗಳ ಮೇಲೂ ಇರುವುದರಿಂದ ಅವರನ್ನು ಈ ಕಾನೂನಿನಡಿ ತರುವುದು ಕಾರ್ಯಸಾಧ್ಯವಲ್ಲ ಎಂದು 1989ರಲ್ಲಿ ಅಮೆರಿಕ ಸಂಸತ್ತು ನಿರ್ಧರಿಸಿತ್ತು. ಆದ್ದರಿಂದ ತಾಂತ್ರಿಕವಾಗಿ, ಟ್ರಂಪ್ ಅವರ ಷೇರು ಮಾರುಕಟ್ಟೆ ವ್ಯವಹಾರ ಕಾನೂನುಬಾಹಿರವಲ್ಲ.
ಅಧಿಕಾರದಲ್ಲಿದ್ದಾಗ ಅಧ್ಯಕ್ಷರು ಹಣಕಾಸು ವ್ಯವಹಾರ ನಡೆಸುವುದು ಕಾನೂನುಬದ್ಧವಾಗಿದ್ದರೂ ಮತ ಹಾಕಿದ ಜನರ ಎದುರು ಹಿತಾಸಕ್ತಿ ಸಂಘರ್ಷದ ಮುಲಾಜಿಗೆ ಸಿಲುಕದಂತೆ ತಮ್ಮ ವ್ಯಕ್ತಿತ್ವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಟರ್, ಒಬಾಮಾರಿಂದ ಬೈಡನ್ ವರೆಗೆ ಹಲವು ಅಧ್ಯಕ್ಷರು ಷೇರು ವ್ಯವಹಾರ ನಡೆಸದೇ ಕಡ್ಡಾಯವಲ್ಲದ ನಿಯಮ ಪಾಲನೆ ಮಾಡಿದ್ದರು.
ಬ್ಲೈಂಡ್ ಟ್ರಸ್ಟ್: ಈ ಹಿಂದೆ ಅಧ್ಯಕ್ಷರಾಗಿದ್ದ ಕಾರ್ಟರ್ ರೀಗನ್, ಕ್ಲಿಂಟನ್ ಇಬ್ಬರೂ ತಮ್ಮ ಸ್ವತ್ತುಗಳನ್ನು ಸ್ವತಂತ್ರ ಟ್ರಸ್ಟಿ ನೋಡಿಕೊಳ್ಳುವ ಬ್ಲೈಂಡ್ ಟ್ರಸ್ಟ್ ಅಡಿಗೆ ತಂದಿದ್ದರು. ಇದರನ್ವಯ ಆ ಟ್ರಸ್ಟ್ ಎಲ್ಲಿ ಹೂಡಿಕೆ ಮಾಡಿದೆ ಎಂದು ಫಲಾನುಭವಿಗೆ ತಿಳಿದಿರುವುದಿಲ್ಲ. ಟ್ರಸ್ಟ್ ವ್ಯವಹಾರದಲ್ಲಿ ಮೂಗು ತೂರಿಸುವಂತಿಲ್ಲ.
ಸಕ್ರಿಯ ವಹಿವಾಟು ನಡೆಸದ ಅಧ್ಯಕ್ಷರು: ಒಬಾಮಾ ಮತ್ತು ಬೈಡನ್ ಅಧಿಕಾರದಲ್ಲಿರುವಾಗ ವೈಯಕ್ತಿಕ ಷೇರು ವ್ಯವಹಾರವನ್ನು ಸಂಪೂರ್ಣವಾಗಿ ತಪ್ಪಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ಉಳಿತಾಯ, ಮ್ಯೂಚುವಲ್ ಫಂಡ್ ಮಾತ್ರ ಹೊಂದಿದ್ದರು.
ಹೂಡಿಕೆ ಹಿಂತೆಗೆತ: ಅಮೆರಿಕ ಅಧ್ಯಕ್ಷರಾಗಿದ್ದ ಕಾರ್ಟರ್ ಅವರು ತಮ್ಮ ಪೀನಟ್ ತೋಟವನ್ನು ಮಾರಾಟ ಮಾಡಿದ್ದರು. ತಮ್ಮ ಒಡೆತನದ ಟೆಕ್ಸಾಸ್ ರೇಡಿಯೊ ಕೇಂದ್ರವನ್ನು ಬ್ಲೈಂಡ್ ಟ್ರಸ್ಟ್‌ನಲ್ಲಿ ಇರಿಸಿದ್ದರು.
ವಕೀಲ ರಿಚರ್ಡ್ ಪೇಂಟರ್ ಅವರ ಪ್ರಕಾರ, ಅಧಿಕಾರಿಗಳು, ಸಂಪುಟ ಸದಸ್ಯರು ಅಧಿಕಾರದಲ್ಲಿದ್ದಾಗ ಷೇರು ವ್ಯವಹಾರ ನಡೆಸುವಂತಿಲ್ಲ. ಹೂಡಿಕೆ ಹಿಂತೆಗೆದುಕೊಳ್ಳಬೇಕೆಂದು ಕಾನೂನು ಹೇಳುತ್ತದೆ. ಆದರೆ ಅಧ್ಯಕ್ಷರಿಗೆ ಆ ನಿಯಮ ಅನ್ವಯ ಆಗುವುದಿಲ್ಲ. ಆದರೆ, ಈ ಹಿಂದಿನ ಅಧ್ಯಕ್ಷರೆಲ್ಲ ಸ್ವಯಂಪ್ರೇರಿತವಾಗಿ ನಿಯಮ ಪಾಲನೆ ಮಾಡಿದ್ದಾರೆ. ಟ್ರಂಪ್ ಮಾತ್ರ ಆ ಸಂಪ್ರದಾಯ ಮುರಿದಿದ್ದಾರೆ.
ಎರಡು ಬಾರಿ ರೂಢಿ ಧಿಕ್ಕರಿಸಿದ ಟ್ರಂಪ್
ಮೊದಲ ಅವಧಿ 2017-2021: ಟ್ರಂಪ್ ಅವರು ತಮ್ಮ ಹೂಡಿಕೆ ಮತ್ತು ಸ್ವತ್ತುಗಳನ್ನು ಬ್ಲೈಂಡ್ ಟ್ರಸ್ಟ್ ಅಡಿ ತರಲು ನಿರಾಕರಿಸಿದ್ದರು. ತಮ್ಮ ಸಂಸ್ಥೆಯ ಮಾಲೀಕತ್ವ ಉಳಿಸಿಕೊಂಡ ಅವರು ಮಕ್ಕಳಿಗೆ ದೈನಂದಿನ ವ್ಯವಹಾರ ನಿಯಂತ್ರಣ ಅಧಿಕಾರ ಹಸ್ತಾಂತರಿಸಿದ್ದರು.
2025-2026: ಈ ಅವಧಿಯಲ್ಲಿ 3,700 ಷೇರು ವಹಿವಾಟು ನಡೆಸಿರುವುದು ಎಥಿಕ್ ಫೈಲಿಂಗ್ ದಾಖಲೆ ದೃಢಪಡಿಸಿದೆ. ಅಲ್ಲದೇ, ತಮ್ಮ ಒಂದು ಸಹಿಯಿಂದ ವ್ಯತ್ಯಾಸ ಮಾಡಬಹುದಾದ ಕಂಪನಿಗಳ ಷೇರುಗಳಲ್ಲೇ ಹೂಡಿಕೆ ಮಾಡಿರುವುದು ಕಂಡುಬಂದಿದೆ.
ಉದಾಹರಣೆಗೆ ಚೀನಾಗೆ ಚಿಪ್ ರಫ್ತು ವ್ಯವಹಾರ ನಿಯಂತ್ರಿಸುತ್ತಿದ್ದಾಗಲೇ ಟ್ರಂಪ್ ಎನ್ ವಿಡಿಯಾದಲ್ಲಿ 6 ಮಿಲಿಯನ್ ಡಾಲರ್ ಮೌಲ್ಯದ ಷೇರು ಖರೀದಿಸಿದ್ದರು.
ರಕ್ಷಣಾ ಷೇರುಗಳು: ಇರಾನ್ ವಿರುದ್ಧ ಯುದ್ಧ ಆರಂಭಿಸುವ ಮೊದಲು ಫೆಬ್ರುವರಿ 10 ರಂದು ಲಾಕ್‌ಹೀಡ್, ನಾರ್ತ್ರೋಪ್, ಜನರಲ್ ಡೈನಾಮಿಕ್ಸ್ ಸೇರಿದಂತೆ ಯುದ್ಧೋಪಕರಣ ತಯಾರಿಕಾ ಕಂಪನಿಗಳ ಷೇರು ಖರೀದಿಸಲಾಗಿದೆ.
ಮೂರನೇ ವ್ಯಕ್ತಿಗಳು ಟ್ರಂಪ್ ಅವರ ಷೇರು ಖರೀದಿ ವ್ಯವಹಾರ ನೋಡಿಕೊಳ್ಳುತ್ತಾರೆ ಎಂದು ಅವರ ತಂಡ ಸಮರ್ಥಿಸಿಕೊಂಡಿದೆ.
ಐತಿಹಾಸಿಕ ಮೂಲತತ್ವ ಉಲ್ಲಂಘನೆ:
ಅಧ್ಯಕ್ಷರು ಷೇರು ವ್ಯವಹಾರ ನಡೆಸುವುದಕ್ಕೆ ಕಾನೂನು ಅನುಮತಿಸುತ್ತದೆ. ಆದರೆ, ಜನರ ದೃಷ್ಟಿಯಲ್ಲಿ ಅದು ಅಧಿಕಾರ ದುರುಪಯೋಗವಾಗಿಯೇ ಕಾಣುತ್ತದೆ. ಹಿಂದಿನ ಅಧ್ಯಕ್ಷರ ರೀತಿ ಟ್ರಂಪ್ ತತ್ವ ಪಾಲನೆಯ ಗೋಜಿಗೆ ಹೋಗಿಲ್ಲ. ಟ್ರಂಪ್ 3,700 ಷೇರು ವಹಿವಾಟು ನಡೆಸುವ ಮೂಲಕ ವಾಟರ್‌ಗೇಟ್ ಹಗರಣದ ನಂತರ ನಿಗದಿಪಡಿಸಿದ 45 ವರ್ಷಗಳ ನೈತಿಕ ರೂಢಿಯನ್ನು ಮುರಿದಿದ್ದಾರೆ. ಸ್ವಚ್ಛ ರಾಜಕಾರಣದ ಮೇಲ್ಪಂಕ್ತಿಗೆ ಎಳ್ಳುನೀರು ಬಿಟ್ಟಿದ್ದಾರೆ.

