ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಪ್ರಚಾರಗಳು ಹಾಗೂ ಬೆಂಬಲಿಗರು ಅಳವಡಿಸುವ ಫ್ಲೆಕ್ಸ್‌ಬೋರ್ಡ್‌ಗಳ ಆಧಾರದ ಮೇಲೆ ಕೇರಳದ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಧರಿಸಲಾಗುವುದಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಬುಧವಾರ ಹೇಳಿದರು.
ಯುಡಿಎಫ್ ಚುನಾವಣಾ ಪ್ರಚಾರವನ್ನು ಪ್ರತಿಪಕ್ಷ ನಾಯಕ ವಿ.ಡಿ. ಸತೀಸನ್ ಮುನ್ನಡೆಸಿರುವ ಹಿನ್ನೆಲೆಯಲ್ಲಿ, ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕು ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ದಿಲ್ಲಿಯಲ್ಲಿ ಉತ್ತರಿಸಿದ ಅವರು, ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಪಕ್ಷದ ನಿಗದಿತ ಕಾರ್ಯವಿಧಾನದ ಪ್ರಕಾರವೇ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
"ಸಾಮಾಜಿಕ ಜಾಲತಾಣ ಪ್ರಚಾರಗಳು ಅಥವಾ ಬೆಂಬಲಿಗರು ಹಾಕುವ ಫ್ಲೆಕ್ಸ್‌ಬೋರ್ಡ್ ಗಳ ಆಧಾರದ ಮೇಲೆ ಮುಖ್ಯಮಂತ್ರಿ ಆಯ್ಕೆ ನಡೆಯುವುದಿಲ್ಲ. ಈಗಾಗಲೇ ಜಾರಿಯಲ್ಲಿರುವ ಕಾರ್ಯವಿಧಾನದ ಅನುಸಾರ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಅದರ ಭಾಗವಾಗಿ ಇಬ್ಬರು ಪಕ್ಷದ ವೀಕ್ಷಕರು ಬುಧವಾರ ಸಂಜೆ ವೇಳೆಗೆ ಕೇರಳಕ್ಕೆ ಆಗಮಿಸಲಿದ್ದು, ಅವರು ಎಲ್ಲ ಶಾಸಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬಳಿಕ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ" ಎಂದು ಹೇಳಿದರು.
"ಪಕ್ಷದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ಹೈಕಮಾಂಡ್ ತೀರ್ಮಾನ ಮಾಡಲಿದೆ. ಆ ನಿರ್ಧಾರವನ್ನು ಎಲ್ಲರೂ ಸ್ವೀಕರಿಸಲಿದ್ದಾರೆ" ಎಂದರು.
ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ ಒಳಗೆ ಪೈಪೋಟಿ ಇದೆ ಎಂಬ ಚರ್ಚೆಗಳು ಮತದಾರರಲ್ಲಿ ಅಸಮಾಧಾನ ಉಂಟುಮಾಡಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಯಾವುದೇ ಪೈಪೋಟಿಯೇ ಇಲ್ಲ. ಆದ್ದರಿಂದ ಮತದಾರರಲ್ಲಿ ಅಸಮಾಧಾನಕ್ಕೂ ಅವಕಾಶವಿಲ್ಲ" ಎಂದು ಹೇಳಿದರು.
ಕೇರಳದಲ್ಲಿ ಮುಖ್ಯಮಂತ್ರಿ ಆಯ್ಕೆ ಘೋಷಣೆಯಲ್ಲಿ ವಿಳಂಬವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಚುನಾವಣೆ ನಡೆದ ಇತರೆ ರಾಜ್ಯಗಳಲ್ಲಿಯೂ ಇನ್ನೂ ಮುಖ್ಯಮಂತ್ರಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಹಾಗಿದ್ದಾಗ ಕೇರಳದ ವಿಷಯದಲ್ಲಿ ಮಾತ್ರ ವಿಳಂಬವಾಗಿದೆ ಎಂದು ಹೇಗೆ ಹೇಳಬಹುದು?" ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಅಧ್ಯಕ್ಷರ ನೇಮಕಾತಿ ಅಂತಿಮಗೊಳಿಸುವ ಕುರಿತು ರಾಹುಲ್ ಗಾಂಧಿ ಅವರೊಂದಿಗೆ ಸಭೆ ನಡೆಸಲು ತಾವು ದಿಲ್ಲಿಯಲ್ಲಿ ಇರುವುದಾಗಿ ಚೆನ್ನಿತ್ತಲ ತಿಳಿಸಿದರು.

