ನವದೆಹಲಿ: ಕೆಲ ದಿನಗಳ ಹಿಂದೆ ಇಂಧನ ಮಿತ ಬಳಕೆ, ಚಿನ್ನ ಖರೀದಿ ನಿಲ್ಲಿಸುವಂತೆ ದೇಶದ ಜನರಿಗೆ ಮನವಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಇಂದು ತಮ್ಮ ಬೆಂಗಾವಲು ವಾಹನಗಳನ್ನು ಕಡಿತಗೊಳಿಸುವ ಮೂಲಕ ಮಾದರಿಯಾಗಿದ್ದರು. ಈಗ ಪ್ರಧಾನಿ ಹಾದಿಯಲ್ಲೇ ಸಾಗಿರುವ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಇತರೆ ನಾಯಕರು ಇಂಧನ ಮಿತ ವ್ಯಯಕ್ಕೆ ಮುಂದಾಗಿದ್ದಾರೆ.
ಇಂಧನವನ್ನು ಬುದ್ಧಿವಂತಿಕೆಯಿಂದ ಬಳಸುವ ಮೂಲಕ ಇಂಧನ ಬಳಕೆ ತಗ್ಗಿಸಿ ಆಮದು ಕಡಿತಗೊಳಿಸಿ, ವಿದೇಶಿ ವಿನಿಮಯ ಉಳಿಸುವ ಇರಾದೆ ಮೋದಿ ಅವರದ್ದಾಗಿತ್ತು.
ಇತ್ತೀಚೆಗೆ ಗುಜರಾತ್ ಮತ್ತು ಅಸ್ಸಾಂಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎಸ್‌ಪಿಜಿ ಸೇರಿದಂತೆ ಮೋದಿಯವರ ಬೆಂಗಾವಲು ವಾಹನಗಳ ಗಾತ್ರವನ್ನು ತಗ್ಗಿಸಲಾಗಿತ್ತು. ಅಲ್ಲದೇ ತಮ್ಮ ಬೆಂಗಾವಲು ಪಡೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಸೇರ್ಪಡೆಗೂ ಮೋದಿ ಸೂಚಿಸಿದ್ದಾರೆ ಎಂದು ವರದಿಯಾಗಿದೆ..
ಮೋದಿ ಅವರು ತಮ್ಮ ಬೆಂಗಾವಲು ವಾಹನಗಳಲ್ಲಿ ಕಡಿತ ಮಾಡುತ್ತಿದ್ದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ತಮ್ಮ ಮತ್ತು ಸಚಿವರ ಬೆಂಗಾವಲಾಗಿ ಬಳಸುತ್ತಿರುವ ಶೇ 50ರಷ್ಟು ವಾಹನಗಳ ಕಡಿತಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮುಖ್ಯ ಕಾರ್ಯದರ್ಶಿ, ಡಿಜಿಪಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಎಲ್ಲ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಸಿದ ಯೋಗಿ, ಬುದ್ಧಿವಂತಿಕೆಯಿಂದ ಇಂಧನ ಬಳಕೆ ಕುರಿತಾದ ಪ್ರಧಾನಿ ಮೋದಿ ಅವರ ಸಲಹೆಗಳನ್ನು ಪಾಲಿಸುವಂತೆ ಅವರನ್ನು ಒತ್ತಾಯಿಸಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಸಹ ತಮ್ಮ ಬೆಂಗಾವಲು ಪಡೆಯಲ್ಲಿ ಕಡಿಮೆ ವಾಹನಗಳನ್ನು ಬಳಸುವುದಾಗಿ ಹೇಳಿದ್ದಾರೆ. ಸಚಿವರಿಗೂ ಇದನ್ನೇ ಪಾಲಿಸುವಂತೆ ಸೂಚಿಸಿರುವ ಅವರು, ಜನರೂ ಇದನ್ನು ಅನುಸರಿಸಲು ಉತ್ತೇಜಿಸುವಂತೆ ತಿಳಿಸಿದ್ದಾರೆ.
ದೆಹಲಿ ಸಿಎಂ ರೇಖಾ ಗುಪ್ತಾ ಸಹ ತಾವೂ ಸೇರಿದಂತೆ ಸಚಿವರು, ಶಾಸಕರು ಮತ್ತು ಇತರೆ ಸರ್ಕಾರಿ ನೌಕರರು ಕಡಿಮೆ ವಾಹನಗಳ ಬಳಕೆಗೆ ಆದೇಶಿಸಿದ್ದಾರೆ. ಇದೇ ಶಿಷ್ಟಾಚಾರ ಪಾಲಿಸುವಂತೆ ದೆಹಲಿ ನಾಗರಿಕರಿಗೂ ಕರೆ ನೀಡಿರುವ ಅವರು, ಮೆಟ್ರೊ ರೈಲು, ಬಸ್‌ಗಳನ್ನು ಬಳಸಲು ಕರೆ ನೀಡಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು, ಬೆಂಗಾವಲು ವಾಹನ ಕಡಿತಗೊಳಿಸುವಂತೆ ಸಂಪುಟ ಸದಸ್ಯರಿಗೆ ಸೂಚಿಸಿದ್ದು, ಅನಗತ್ಯ ವಾಹನಗಳ ಬಳಕೆಗೆ ಕಡಿವಾಣ ಹಾಕಲು ಸೂಚಿಸಿದ್ದಾರೆ.
ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಬಿಹಾರ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಚೌಧರಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಛತ್ತೀಸಗಢ ಮುಖ್ಯಮಂತ್ರಿ ವಿಷ್ಣು ಸಾಯಿ ಮತ್ತು ಹಿಮಾಚಲ ಪ್ರದೇಶದ ರಾಜ್ಯಪಾಲ ಕವಿಂದರ್ ಗುಪ್ತಾ ಸಹ ಮೋದಿ ಅವರ ಸಲಹೆಯನ್ನು ಅನುಸರಿಸಲು ಮುಂದಾಗಿದ್ದಾರೆ.

