ನವದೆಹಲಿ: ದೆಹಲಿಯ ಕೆಂಪುಕೋಟೆ ಸಮೀಪ ನಡೆದ ಕಾರು ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಡಾ. ಉಮರ್ ಉನ್ ನಬಿ ಸ್ಫೋಟಕಗಳನ್ನು ತಯಾರಿಸಲು ರಾಸಾಯನಿಕಗಳನ್ನು ಖರೀದಿಸಲು ನಕಲಿ ಗುರುತಿನ ಚೀಟಿ ಬಳಸಿರುವುದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪತ್ತೆ ಮಾಡಿದೆ.
'ಉಮರ್ ವಿವಿಧ ರಾಸಾಯನಿಕಗಳಿಗೆ ಸಂಬಂಧಿಸಿದಂತೆ ಆನ್‌ಲೈನ್ ಸೇರಿದಂತೆ ವಿವಿಧೆಡೆ ಹುಡುಕಾಡಿದ್ದ. ಸ್ಫೋಟಕ ವಸ್ತುವನ್ನು ತಯಾರಿಸುವ ಉದ್ದೇಶದಿಂದ ಪ್ರಯೋಗ ನಡೆಸಲು ಫರೀದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿರುವ ತನ್ನ ಫ್ಲಾಟ್‌ನಲ್ಲಿ ತಾತ್ಕಾಲಿಕ ಪ್ರಯೋಗಾಲಯವನ್ನು ಸ್ಥಾಪಿಸಿದ್ದ' ಎಂದು ಎನ್‌ಐಎ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
'ಮುಂಬೈನ ಸಣ್ಣ ವ್ಯಾಪಾರಿಯೊಬ್ಬರಿಂದ 2024ರ ಸೆಪ್ಟೆಂಬರ್ 25ರಂದು ರಾಸಾಯನಿಕ ಪೂರೈಕೆ ಮಾಡಿದ ರಸೀದಿಯನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದರು. ಸ್ಫೋಟಕಗಳನ್ನು ತಯಾರಿಸಲು ಅಗತ್ಯವಿರುವ ವಸ್ತುಗಳನ್ನು ಸಂಗ್ರಹಿಸುವ ಪೂರೈಕೆ ಸರಪಳಿಯನ್ನು ಭೇದಿಸಲು ಇದರಿಂದ ಸಾಧ್ಯವಾಯಿತು' ಎಂದು ಮಾಹಿತಿ ನೀಡಿದ್ದಾರೆ.

