ಕುಂಬಳೆ: ಉಪ್ಪಳ ಸೋಂಕಾಲಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 53.580 ಗ್ರಾಂ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದಲ್ಲಿ ಮುಖ್ಯ ಆರೋಪಿಗಳಲ್ಲೋರ್ವನಾದ ಯುವಕನನ್ನು ಪೋಲೀಸರು ಸಾಹಸಿಕವಾಗಿ ಸೆರೆಹಿಡಿದಿದ್ದಾರೆ. ಕಲ್ಲಿಕೋಟೆ ನಿವಾಸಿ ಗೋಡ್ವಿನ್ ಚಾಕೊ (33) ಎಂಬಾತನನ್ನು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಕುಂಬಳೆ ಪೋಲೀಸ್ ಇನ್‍ಸ್ಪೆಕ್ಟರ್ ಬೈಜು ಕೆ ಜೋಸ್, ಎಸ್‍ಐ ಅನಂತಕೃಷ್ಣನ್ ಆರ್ ಮೆನೋನ್ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಕಲ್ಲಿಕೋಟೆ ತಿರುವಂಬಾಡಿ ಪೊನ್ನಮಂಗಲ ನಿವಾಸಿಯಾದ ಗೋಡ್ವಿನ್ ಚಾಕೊ ಈಗ ಕರ್ನಾಟಕದ ಮಂಡ್ಯದಲ್ಲಿ ವಾಸಿಸುತ್ತಿದ್ದನು.
2026 ಫೆಬ್ರವರಿ 1 ರಂದು ಮುಂಜಾನೆ ಸೋಂಕಾಲಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 53 ಗ್ರಾಂ ಎಂಡಿಎಂಎ ಸಹಿತ ಮಂಗಲ್ಪಾಡಿ ಅಂಬಾರುಪಳ್ಳ ಮಾಸಿದ ಮಹಲ್‍ನ ಇದ್ದಿನ್ ಕುಂಞÂ ಇರ್ಷಾದ್ (34) ಎಂಬಾತನನ್ನು ಬಂಧಿಸಲಾಗಿತ್ತು. ಈತನಿಗೆ ಎಂಡಿಎಂಎ ನೀಡಿರುವುದು ಗೋಡ್ವಿನ್ ಚಾಕೋ ಆಗಿದ್ದಾನೆಂದು ಪೋಲೀಸರಿಗೆ ಮಾಹಿತಿ ಲಭಿಸಿತ್ತು. ಅನಂತರ ಈತನ ಮೇಲೆ ಪೋಲೀಸರು ನಿಗಾ ಇರಿಸಿದ್ದರು. ಈತ ಮೈಸೂರಿಗೆ ತಲುಪಿರುವುದಾಗಿ ಗುಪ್ತ ಮಾಹಿತಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗೆ ಲಭಿಸಿತ್ತು. ಇದರಂತೆ ಪೋಲೀಸ್ ತಂಡ ಭಾನುವಾರ ರಾತ್ರಿ ಮೈಸೂರಿಗೆ ತೆರಳಿ ಆರೋಪಿಯನ್ನು ಪತ್ತೆಹಚ್ಚಿದೆ. ಆತನನ್ನು ಪೋಲೀಸರು ಕಸ್ಟಡಿಗೆ ತೆಗೆಯಲು ಮುಂದಾಗುತ್ತಿದ್ದಂತೆ ಓಡಿದ ಗೋಡ್ವಿನ್ ಚಾಕೊ ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ಪರಾರಿಯಾಗಿದ್ದನು. ಕೂಡಲೇ ಆ ಕಾರನ್ನು ಪೋಲೀಸರು ಹಿಂಬಾಲಿಸಿದರು. ಗಂಟೆಗಳ ಕಾಲ ಸಂಚರಿಸಿದ ಬಳಿಕ ಮಡಿಕೇರಿಯಲ್ಲಿ ಪೋಲೀಸ್ ತಂಡ ಸಂಚರಿಸಿದ ವಾಹನವನ್ನು ರಸ್ತೆಗೆ ಅಡ್ಡ ನಿಲ್ಲಿಸಿ ಕಾರನ್ನು ತಡೆಹಿಡಿಯಲಾಗಿದೆ. ಅಲ್ಲಿಂದಲೂ ಗೋಡ್ವಿನ್ ಚಾಕೊ ಕಾರಿನಿಂದ ಇಳಿದು ಓಡಲು ಪ್ರಯತ್ನಿಸಿದ್ದು ಅಷ್ಟರಲ್ಲಿ ಪೋಲೀಸರು ಆತನನ್ನು ಸೆರೆಹಿಡಿದಿದ್ದಾರೆ. ಆರೋಪಿ ಸಂಚರಿಸಿದ ಕಾರನ್ನು ಕಸ್ಟಡಿಗೆ ತೆಗೆಯಲಾಗಿದೆ. ಆರೋಪಿಯನ್ನು ಕುಂಬಳೆ ಪೋಲೀಸ್ ಠಾಣೆಗೆ ತಲುಪಿಸಿ ತನಿಖೆ ಬಳಿಕ ಕಾಸರಗೋಡು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ಈ ವೇಳೆ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.

