ಚೆನ್ನೈ: ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ವಿಜಯ್, ಬುಧವಾರ ತಮಿಳುನಾಡಿನ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗಾಗಿ ಹಕ್ಕು ಮಂಡಿಸಿದ್ದಾರೆ. ಆದರೆ ಬಹುಮತಕ್ಕೆ ಬೇಕಾಗಿರುವ ಸಂಖ್ಯಾಬಲದ ಕೊರತೆಯಿಂದಾಗಿ ಮುಖ್ಯಮಂತ್ರಿಯಾಗಿ ನಾಳೆ (ಮೇ 7) ಪ್ರಮಾಣವಚನ ಸ್ವೀಕರಿಸುವುದು ಅನುಮಾನವೆನಿಸಿದೆ.
ಈ ಕುರಿತು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.
234 ಸದಸ್ಯ ಬಲದ ತಮಿಳುನಾಡಿನಲ್ಲಿ ಬಹುಮತವನ್ನು ಸಾಬೀತು ಮಾಡಲು ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 118 ಆಗಿದೆ.
108 ಸ್ಥಾನಗಳಲ್ಲಿ ಗೆಲುವು ದಾಖಲಿಸಿರುವ ಟಿವಿಕೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಕಾಂಗ್ರೆಸ್ ಬೆಂಬಲದ ಹೊರತಾಗಿಯೂ ಬಹುತಮಕ್ಕೆ ಬೇಕಾಗಿರುವ ಅಧಿಕೃತ ಸಂಖ್ಯಾಬಲದ ಕೊರತೆ ಕಾಡುತ್ತಿದೆ. ಇದರಿಂದ ರಾಜ್ಯಪಾಲರನ್ನು ಮನದಟ್ಟು ಮಾಡಲು ಸಾಧ್ಯವಾಗಿಲ್ಲ.
ಬಹಮತಕ್ಕೆ ಇನ್ನೂ 10 ಸ್ಥಾನಗಳ ಅಗತ್ಯವಿದೆ. ವಿಜಯ್ ಎರಡು ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದರಿಂದ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ. ಇದರಿಂದ ಟಿವಿಕೆ ಸಂಖ್ಯಾಬಲ 107 ಆಗಲಿದೆ.
ಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಫಲಿತಾಂಶದ ಬಳಿಕ ಟಿವಿಕೆಗೆ ಬೆಂಬಲ ನೀಡಲು ನಿರ್ಧರಿಸಿತ್ತು. ಕಾಂಗ್ರೆಸ್‌ನ ಐವರು ಶಾಸಕರು ಬೆಂಬಲ ನೀಡಿದ್ದಾರೆ.
ನೂತನ ಸರ್ಕಾರ ರಚಿಸುವುದಕ್ಕಾಗಿ ವಿಜಯ್ ಲೋಕಭವನಕ್ಕೆ ತೆರಳಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾಗಿ ಹಕ್ಕು ಮಂಡಿಸಿದ್ದರು.
ಕಾಂಗ್ರೆಸ್‌ನ ಐದು ಸ್ಥಾನಗಳನ್ನು ಸೇರಿಸಿದರೆ ಸಂಖ್ಯಾಬಲ 113ಕ್ಕೆ ಏರಿಕೆಯಾಗುತ್ತದೆ. ಆದರೆ ಬಹುಮತಕ್ಕೆ ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 118 ಆಗಿದೆ. ಅಂದರೆ ಇನ್ನೂ ಐದು ಸ್ಥಾನಗಳ ಕೊರತೆಯಿದೆ.
ವಿಧಾನಸಭೆ ವಿಸರ್ಜನೆ...
ಏತನ್ಮಧ್ಯೆ ತಮಿಳುನಾಡಿನ 16ನೇ ವಿಧಾನಸಭೆ ಅನ್ನು ರಾಜ್ಯಪಾಲರು ವಿಸರ್ಜಿಸಿದ್ದಾರೆ.
234 ಸದಸ್ಯ ಬಲದ ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿದ್ದು, ಮೇ 4ರಂದು ಫಲಿತಾಂಶ ಪ್ರಕಟಗೊಂಡಿತ್ತು. ವಿಜಯ್ ನೇತೃತ್ವದ ಟಿವಿಕೆ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಡಿಎಂಕೆ 59, ಎಐಎಡಿಎಂಕೆ 47, ಕಾಂಗ್ರೆಸ್ 5, ಪಿಎಂಕೆ 4, ವಿಸಿಕೆ, ಐಯುಎಂಎಲ್, ಸಿಪಿಐ ಮತ್ತು ಸಿಪಿಐ(ಎಂ) ತಲಾ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ಪಕ್ಷಗಳು ತಲಾ 1 ಸ್ಥಾನ ಪಡೆದುಕೊಂಡಿವೆ.

