ನವದೆಹಲಿ: ಮೇ 18 ರಂದು ತಿರುವನಂತಪುರದಲ್ಲಿ ನಡೆಯಲಿರುವ ಕೇರಳಂನ ನಿಯೋಜಿತ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿವೆ. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾಗವಹಿಸುವ ಬಗ್ಗೆ ಯಾವುದೇ ಖಚಿತತೆ ಇಲ್ಲ.
ಈ ಸಮಾರಂಭಕ್ಕೆ ಇತರ ರಾಜ್ಯಗಳ ನಾಯಕರನ್ನು ಆಹ್ವಾನಿಸಲಾಗುವುದು ಎಂದು ಸತೀಶನ್ ಈ ಹಿಂದೆ ತಿಳಿಸಿದ್ದರು. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಾದ ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳು ಭಾಗವಹಿಸುವ ಸಾಧ್ಯತೆಯಿದೆ.
ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿಗೂ ಆಹ್ವಾನ ನೀಡಿದ್ದು, ಅವರು ಭಾಗವಹಿಸುವ ಬಗ್ಗೆ ಯಾವುದೇ ಖಚಿತ ನಿರ್ಧಾರ ಹೊರಬಂದಿಲ್ಲ.
ನಾಳೆ (ಸೋಮವಾರ) ತಿರುವನಂತಪುರದ ಸೆಂಟ್ರಲ್ ಸ್ಟೇಡಿಯಂನಲ್ಲಿ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿರುವ ಸಮಾರಂಭದಲ್ಲಿ ಸತೀಶನ್ ಅವರು ಕೆಲವು ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕೇರಳಂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಒಟ್ಟು 140 ಸ್ಥಾನಗಳ ಪೈಕಿ 102 ಸ್ಥಾನಗಳನ್ನು ಗೆದ್ದುಕೊಂಡಿದೆ.

