ವಿಶ್ವಸಂಸ್ಥೆ: 'ನೀವು ಈ ಗಣಿತ ವಸ್ತು ಪ್ರದರ್ಶನದಲ್ಲಿ ನಡೆದುಕೊಂಡು ಹೋಗಿ. ಇಂದಿನ ತಾಂತ್ರಿಕ ಯುಗದಲ್ಲಿ ಬಳಕೆಯಾಗುತ್ತಿರುವ ಎಲ್ಲ ಕೋಡ್‌ಗಳನ್ನೂ ಇಲ್ಲಿ ಪ್ರದರ್ಶಿಸಲಾಗಿದೆ. ಈ ಕೋಡ್‌ಗಳ ಪರಿಕಲ್ಪನೆಯನ್ನು ಶತ ಶತಮಾನಗಳ ಹಿಂದೆಯೇ ಭಾರತ ಸೃಷ್ಟಿಸಿದೆ. ಗಣಿತದಲ್ಲಿನ ಆವಿಷ್ಕಾರಗಳು ಹೇಗೆ ಭಾರತದ ನಾಗರಿಕತೆಯಿಂದ ವಿಶ್ವದಗಲಕ್ಕೆ ಹರಡಿಕೊಂಡಿತು ಮತ್ತು ಇವುಗಳು ಈಗಲೂ ಆಧುನಿಕ ಜೀವನವನ್ನು ಹೇಗೆ ಪ್ರಭಾವಿಸುತ್ತಿವೆ...
ನೋಡಿ.'
- ಹೀಗೆಂದವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್. ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ 'ಶೂನ್ಯದಿಂದ ಅನಂತದವರೆಗೆ- ಗಣಿತಕ್ಕೆ ಭಾರತದ ನಾಗರಿಕತೆಯ ಕೊಡುಗೆ' ಎಂಬ ಹೆಸರಿನ ಗಣಿತ ವಸ್ತು ಪ್ರದರ್ಶನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ನಿಯೋಗ ಇದೇ ಮೊದಲ ಬಾರಿಗೆ ಇಂಥ ಪ್ರದರ್ಶನವನ್ನು ಆಯೋಜಿಸಿದೆ.
'ವೈಜ್ಞಾನಿಕ ಪ್ರಗತಿಗೆ ಸಂಬಂಧಿಸಿ ಕಾಲಘಟ್ಟ ಮತ್ತು ಭೌಗೋಳಿಕ ಮಿತಿಗಳನ್ನು ಒಳಗೊಂಡು ಜಾಗತಿಕವಾಗಿ ಬಹಳ ಸೀಮಿತ ದೃಷ್ಟಿಕೋನದಲ್ಲಿ ಸಂಕಥನಗಳನ್ನು ಹೆಣೆಯಲಾಗಿದೆ. ಇಂಥ ಐತಿಹಾಸಿಕ ವಿರೂಪಗಳನ್ನು 'ಸರಿಪಡಿಸುವ' ಅಗತ್ಯವಿದೆ' ಎಂದರು.
'ಶೂನ್ಯ, ದಶಾಂಶ, ಬೀಜಗಣಿತ, ಟ್ರಿಗನಾಮಿಟ್ರಿ ರೀತಿಯ ಗಣಿತದ ಮೂಲ ಪರಿಕಲ್ಪನೆಗಳನ್ನು ಈ ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಜೊತೆಗೆ, ಗಣಿತದಲ್ಲಿನ 'ಅನಂತ' (ಇನ್ಫಿನಿಟಿ) ಎಂಬ ಪರಿಕಲ್ಪನೆಯು ಮೊದಲು ಹುಟ್ಟಿದ್ದು ಭಾರತದಲ್ಲಿ. ನಂತರವೇ ಅದು ಜಗತ್ತಿಗೆ ತಿಳಿಯಿತು' ಎಂದು ವಿಶ್ವಸಂಸ್ಥೆಗೆ ಭಾರತ ಕಾಯಂ ಪ್ರತಿನಿಧಿಯಾದ ಪರ್ವತನೇನಿ ಹರೀಶ್ ಅಭಿಪ್ರಾಯಪಟ್ಟರು. ಮೇ 12ರಿಂದ 15ರವರೆಗೆ ಪ್ರದರ್ಶನ ಇರಲಿದೆ.

