ತಿರುವನಂತಪುರ: ಕೇರಳಂ ನೂತನ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿರುವ ವಿ.ಡಿ. ಸತೀಶನ್, ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ ಹಲವಾರು ಜನಪರ ಘೋಷಣೆಗಳನ್ನು ಮಾಡಿದ್ದಾರೆ.
ಜೂನ್ 15ರಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಗೌರವ ಧನ ಹೆಚ್ಚಳ ಮತ್ತು ಹಿರಿಯ ನಾಗರಿಕರಿಗೆ ಪ್ರತ್ಯೇಕ ಇಲಾಖೆಯನ್ನು ರಚಿಸುವುದಾಗಿ ಪ್ರಕಟಿಸಿದ್ದಾರೆ.
ಮೊದಲ ಸಚಿವ ಸಂಪುಟ ಸಭೆಯಲ್ಲೇ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಯಿತು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆಯ ಕುರಿತು ವಿವರವಾದ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದು ಹೇಳಿದ್ದಾರೆ.
ದೇಶದಲ್ಲೇ ಮೊದಲ ಬಾರಿಗೆ ವೃದ್ಧರಿಗಾಗಿ ಪ್ರತ್ಯೇಕ ಇಲಾಖೆ ಜಾರಿಗೆ ಬರಲಿದೆ. ಸಮಾಜವು ಹಿರಿಯ ನಾಗರಿಕರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಹಿರಿಯ ನಾಗರಿಕರಿಗೆ ಗೌರವಾನ್ವಿತ ಆರೈಕೆ ಖಾತ್ರಿಪಡಿಸುವ ಮೂಲಕ ಕೇರಳಂ ಮಾದರಿ ನಾಗರಿಕ ಸಮಾಜವಾಗಬೇಕು ಎಂದು ಸತೀಶನ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ನೀಡಿದ ಭರವಸೆಯಂತೆ ಗೌರವಧನವನ್ನು ತಿಂಗಳಿಗೆ ₹3000 ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದೇ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಶಾಲಾ ಅಡುಗೆ ಸಿಬ್ಬಂದಿಗಳಿಗೆ ಮಾಸಿಕ ₹1,000 ಹೆಚ್ಚಳವನ್ನು ಘೋಷಿಸಿದ್ದಾರೆ.
ಕೇರಳಂ ವಿಧಾನಸಭೆಯಲ್ಲಿ ಮೇ 21ರಂದು ನೂತನ ಶಾಸಕರ ಪ್ರಮಾಣವಚನ ಮತ್ತು ಮೇ 22ರಂದು ಸಭಾಧ್ಯಕ್ಷರ ಆಯ್ಕೆ ನಡೆಯಲಿದೆ.

