ನವದೆಹಲಿ: ತಮಿಳುನಾಡಿನಲ್ಲಿ ಸರ್ಕಾರ ರಚನೆ ಅತಂತ್ರ ಸ್ಥಿತಿಗೆ ತಲುಪಿದೆ. ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಮ್ಯಾಜಿಕ್ ನಂಬರ್ ತಲುಪಲಾಗದ ಕಾರಣ ಪಕ್ಷದ ಮುಖ್ಯಸ್ಥ ವಿಜಯ್, ಸ್ಥಿರ ಸರ್ಕಾರ ರಚಿಸಿ ಸಿಎಂ ಗಾದಿಗೇರಲು ಒದ್ದಾಡುತ್ತಿದ್ದಾರೆ.
ಸದ್ಯ ಈ ಪರಿಸ್ಥಿತಿಗೆ ಅನುಗುಣವಾಗಿ ಅತಿದೊಡ್ಡ ಪಕ್ಷವಾಗಿದ್ದರೂ ಸರ್ಕಾರ ರಚಿಸಲು ಸಾಧ್ಯವಾಗದೇ ವಿರೋಧ ಪಕ್ಷದಲ್ಲಿ ಕುಳಿತಿದ್ದ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಅವರು ಸುಮಾರು ಮೂರು ದಶಕಗಳ ಹಿಂದೆ ಲೋಕಸಭೆಯಲ್ಲಿ ಮಾಡಿದ್ದ ಭಾಷಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಲೋಕಸಭೆಯಲ್ಲಿ ವಿಶ್ವಾಸ ಮತಯಾಚನೆಯ ಚರ್ಚೆಯ ಸಂದರ್ಭದಲ್ಲಿ ಸಮ್ಮಿಶ್ರ ರಾಜಕೀಯದ ವಿರೋಧಾಭಾಸಗಳ ಕುರಿತು ನೀಡಿದ ಹೇಳಿಕೆ ವಿಡಿಯೊದಲ್ಲಿದೆ.
ಪ್ರಮೋದ್ ಮಹಾಜನ್ ಹೇಳಿದ್ದು,
'ಚೀನಾದ ಪ್ರತಿನಿಧಿಗಳು ಭಾರತಕ್ಕೆ ಬಂದ ಸಂದರ್ಭದಲ್ಲಿ ನಿಮ್ಮ ಪ್ರಜಾಪ್ರಭುತ್ವ ಹೇಗಿದೆ ಎಂದು ಕೇಳಿದರು, ಅದಕ್ಕೆ ನನ್ನ ಉದಾಹರಣೆಯೊಂದಿಗೆ ಹೇಳುತ್ತೇನೆ ಎಂದು ಮಾತು ಆರಂಭಿಸಿದೆ. ನಾನು ಪ್ರಮೋದ್ ಮಹಾಜನ್. ನಾನು ಲೋಕಸಭಾ ಸದಸ್ಯ. ನಾನು ಏಕೈಕ ಅತಿದೊಡ್ಡ ಪಕ್ಷಕ್ಕೆ ಸೇರಿದವನು ಮತ್ತು ನಾನು ವಿರೋಧ ಪಕ್ಷದಲ್ಲಿದ್ದೇನೆ. ಇದನ್ನು ಕೇಳಿ ಚೀನಾದ ಪ್ರತಿನಿಧಿಗಳು ಆಶ್ಚರ್ಯದಿಂದ ಪ್ರತಿಕ್ರಿಯಿಸಿದರು. ನಂತರ ನಾನು ಕಾಂಗ್ರೆಸ್ ಸಂಸದ ಬಲ್ಲವ್ ಪಾಣಿಗ್ರಾಹಿ ಅವರನ್ನು ತೋರಿಸಿ ಇವರು ಎರಡನೇ ಅತಿದೊಡ್ಡ ಪಕ್ಷಕ್ಕೆ ಸೇರಿದವರು, ಇವರು ಸರ್ಕಾರದಿಂದ ಹೊರಗಿದ್ದರೂ ಬೆಂಬಲ ನೀಡುತ್ತಿದ್ದಾರೆ ಎಂದೆ. ನಂತರ ಸಿಪಿಐ(ಎಂ)ನ ಎಂಎ ಬೇಬಿ ಅವರನ್ನು ತೋರಿಸಿದೆ, ಇವರು ಮೂರನೇ ಅತಿದೊಡ್ಡ ಪಕ್ಷದಿಂದ ಬಂದವರು, ಇವರು ಪಕ್ಷದ ಒಳಗಿದ್ದಾರೆ ಸರ್ಕಾರದ ಹೊರಗೆ ಇದ್ದಾರೆ. ಕೊನೆಯಲ್ಲಿ ರಮಾಕಾಂತ್ ಖಲಾಪ್ ಅವರನ್ನು ಪರಿಚಯಿಸಿದೆ, ಇವರು ತಮ್ಮ ಪಕ್ಷದ ಏಕೈಕ ಸದಸ್ಯರು ಮತ್ತು ಇವರದೇ ಸರ್ಕಾರ ಎಂದೆ' ಎಂದಿದ್ದಾರೆ.
ಮಹಾಜನ್ ಅವರ ಈ ಮಾತುಗಳಿಗೆ ಸಂಸತ್‌ನಲ್ಲಿದ್ದವರು ಗೊಳ್ಳ್ ಎಂದು ನಕ್ಕಿದ್ದರು. ಸುಮಾರು 45 ನಿಮಿಷಗಳ ಭಾಷಣ ಮಾಡಿದ್ದ ಮಹಾಜನ್, ಸಾರ್ವಜನಿಕ ಕಾರ್ಯಕ್ರಮಗಳ ಸಮಯದಲ್ಲಿ ದೇವೇಗೌಡರು ನಿದ್ದೆ ಮಾಡುವ ಖ್ಯಾತಿಯ ಬಗ್ಗೆ ಪ್ರತಿಕ್ರಿಯಿಸಿ 'ದೇಶವು ಸರ್ಕಾರದ ಉಳಿವಿನ ಬಗ್ಗೆ ಚಿಂತಿತರಾಗಿರುವಾಗ, ಪ್ರಧಾನಿಯವರು ಅನಿಶ್ಚಿತತೆಯ ನಡುವೆಯೂ ಪ್ರಧಾನಿಯವರು ನಿದ್ರಿಸುವಷ್ಟು ನಿರಾಳವಾಗಿ ಕಾಣುತ್ತಿದ್ದರು' ಎಂದಿದ್ದಾರೆ. ದೇವೇಗೌಡರು ಮತ್ತು ಸೀತಾರಾಮ್ ಕೇಸರಿ ಬಗ್ಗೆ ಮಾತನಾಡಿ, 'ಇವರದ್ದು ವಿಚಿತ್ರ ಮದುವೆ, ಇದರಲ್ಲಿ ಅವರ (ದೇವೇಗೌಡ) ಮತ್ತು ವಧುವಿನ ತಂದೆ (ಕಾಂಗ್ರೆಸ್ ಅಧ್ಯಕ್ಷ ಸೀತಾರಾಮ್ ಕೇಸರಿ) ಮೊದಲ ದಿನದಿಂದಲೂ ಜಗಳವಾಡುತ್ತಿದ್ದಾರೆ. ಹನಿಮೂನ್ ಇನ್ನೂ ಪ್ರಾರಂಭವಾಗಿಲ್ಲ, ಮತ್ತು ಅವರು ವಿಚ್ಛೇದನದ ಅಂಚಿನಲ್ಲಿದ್ದಾರೆ' ಎಂದು ವ್ಯಂಗ್ಯವಾಡಿದ್ದರು.
13 ಪಕ್ಷಗಳ ಒಕ್ಕೂಟವಾಗಿದ್ದ ಯುನೈಟೆಡ್ ಫ್ರಂಟ್ ಅನ್ನು ಕಾಂಗ್ರೆಸ್ ಹೊರಗಿನಿಂದ ಬೆಂಬಲಿಸಿದ್ದರ ಬಗ್ಗೆಯೂ ಮಾತನಾಡಿದ್ದ ಅವರು, 'ಹೊರಗಿನಿಂದ ಬರುವ ಬೆಂಬಲ ಎಂದರೆ ಯಾರಾದರೂ ನಿಮ್ಮ ಏಣಿಯನ್ನು ಹಿಡಿದು ನೀವು ಕೊನೆಯ ಮೆಟ್ಟಿಲು ತಲುಪಿದ ತಕ್ಷಣ ಅದನ್ನು ಎಳೆದಂತೆ. ಇದು ಬೆಂಬಲದಂತೆ ಕಾಣುತ್ತಿಲ್ಲ, ಆದರೆ ಸರ್ಕಾರವನ್ನು ಉರುಳಿಸಲು ಒಂದು ಸಿದ್ಧತೆಯಂತೆ' ಎಂದಿದ್ದರು.
ಆಗ ಪರಿಸ್ಥಿತಿ ಏನಿತ್ತು?
1996ರ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಗಲಿಲ್ಲ. 161 ಸ್ಥಾನಗಳೊಂದಿಗೆ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದರು. ಶಿವಸೇನೆ ಸೇರಿದಂತೆ ತನ್ನ ಅಸ್ತಿತ್ವದಲ್ಲಿರುವ ಮಿತ್ರಪಕ್ಷಗಳೊಂದಿಗೆ, ಬಿಜೆಪಿ ಸುಮಾರು 194 ಸ್ಥಾನಗಳನ್ನು ಗಳಿಸಬಹುದಿತ್ತು. ಟಿಡಿಪಿ, ಡಿಎಂಕೆ ಅಥವಾ ಎಜಿಪಿಯಂತಹ ಪ್ರಾದೇಶಿಕ ಪಕ್ಷಗಳಿಂದ ಹೆಚ್ಚುವರಿ ಬೆಂಬಲವನ್ನು ವಾಜಪೇಯಿ ಆಶಿಸಿದರು. ಆದರೆ, ಬಿಜೆಪಿ ವಿರುದ್ಧದ ತಮ್ಮ ಒಗ್ಗಟ್ಟಿಗೆ ಜಾತ್ಯತೀತತೆಯೇ ಕಾರಣ ಎಂದು ಉಲ್ಲೇಖಿಸಿ ಈ ಪಕ್ಷಗಳು ನಿರಾಕರಿಸಿದವು. ಸರ್ಕಾರ ರಚಿಸಲು 272 ಸ್ಥಾನಗಳ ಅಗತ್ಯವಿತ್ತು.
ಸರ್ಕಾರಕ್ಕೆ ಬಹುಮತದ ಕೊರತೆ ಇರುವುದು ಸ್ಪಷ್ಟವಾದಾಗ, ವಾಜಪೇಯಿ 13 ದಿನಗಳ ನಂತರ ಭಾಷಣ ಮಾಡಿ ರಾಜೀನಾಮೆ ನೀಡಿದರು. ಇದರ ನಂತರ ಬಿಜೆಪಿಯೇತರ ಮತ್ತು ಕಾಂಗ್ರೆಸ್ಸೇತರ ಪಕ್ಷಗಳು ಯುನೈಟೆಡ್ ಫ್ರಂಟ್ ಅನ್ನು ರಚಿಸಿದವು. 140 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಹೊರಗಿನಿಂದ ಬೆಂಬಲ ಪಡೆಯಿತು. ಯುನೈಟೆಡ್ ಫ್ರಂಟ್ ಸರಿಸುಮಾರು 190 ಸ್ಥಾನಗಳನ್ನು ಹೊಂದಿತ್ತು. ಕಾಂಗ್ರೆಸ್ ಬೆಂಬಲದೊಂದಿಗೆ, ದೇವೇಗೌಡರು ಬಹುಮತ ಗಳಿಸಿದರು. 1996 ರ ಜೂನ್ 1ರಂದು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

