ಕುಂಬಳೆ: ಗಮಕ ಕಲೆಗೆ ವಿಶೇಷವಾದ ಮನ್ನಣೆ ಇದ್ದು, ಸಾಹಿತ್ಯ ಮತ್ತು ಸಂಗೀತದ ಸರಸ ಸಾಮರಸ್ಯ ಗಮಕ ಕಲೆಯ ವೈಶಿಷ್ಟ್ಯ. ಅವಿಭಜಿತ ದಕ್ಷಿಣ ಕನ್ನಡ ಸಹಿತ ಕಾಸರಗೋಡಿನ ಗಮಕ ಪರಂಪರೆ ವಿಶಾಲವೂ, ವಿಶಿಷ್ಟವೂ ಆದುದು ಎಂದು ಹಿರಿಯ ಶಿಕ್ಷಣ ತಜ್ಞ, ನಿವೃತ್ತ ಅಧ್ಯಾಪಕ, ಸಾಹಿತಿ ವಿ.ಬಿ.ಕುಳಮರ್ವ ಅಭಿಪ್ರಾಯ ವ್ಯಕ್ತಪಡಿಸಿದರು.
ಕಲಾಕುಂಚ ಸಂಘಟನೆಯ ಕಾಸರಗೋಡು ಘಟಕ ಭಾನುವಾರ ಸಂಜೆ ನಾರಾಯಣಮಂಗಲ ಶ್ರೀನಿಧಿಯಲ್ಲಿ ಆಯೋಜಿಸಿದ್ದ ತಿಂಗಳ ಕಾರ್ಯಕ್ರಮದಲ್ಲಿ ಗಮಕ ಕಲೆಯಲ್ಲಿ ಕಾಸರಗೋಡಿನ ಕೊಡುಗೆ ವಿಷಯದ ಬಗ್ಗೆ ಅವರು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಕವಿ, ಗಮಕಿ, ವಾದಿ ಮತ್ತು ವಾಗ್ಮಿಗಳಿಗೆ ಹಿಂದಿನ ರಾಜ ಪರಂಪರೆಯಲ್ಲಿ ವಿಶೇಷ ಮನ್ನಣೆಗಳಿದ್ದವು. ಆ ಹಿನ್ನೆಲೆಯಿಂದ ಮೂಡಿಬಂದ ಗಮಕ ಕಲೆ ಕಾವ್ಯವನ್ನು ಸಲಲಿತವಾಗಿ ಗ್ರಾಹ್ಯವಾಗಿಸಲು ನೆರವಾಗಿದೆ. ಸಾಹಿತ್ಯ, ಸಂಗೀತಗಳ ಮೇಲೈಸುವಿಕೆಯಿಂದ ಕಾವ್ಯ ಗಮಕ ರೂಪದಲ್ಲಿ ಜನಸಾಮಾನ್ಯರ ಮನಸ್ಸುಗಳಿಗೆ ಸುಲಭವಾಗಿ ದಾಟಿ ಕಥಾನಕವನ್ನು ಸುಂದರಗೊಳಿಸುತ್ತದೆ. ಗಮಕ ಕಲೆಯನ್ನು ಶ್ರಾಮಣ ಮಾಸದ ವಿಶೇಷ ಸಂದರ್ಭದಲ್ಲಿ ಪ್ರಚುರ ಪಡಿಸಿದ ಕೀರ್ತಿ ಕಾಸರಗೋಡು ಗಡಿನಾಡ ಘಟಕದ ವಿಶಿಷ್ಟ ಕೊಡುಗೆಯಾಗಿದೆ. ಇಲ್ಲಿಯ ಹಿರಿಯ ಪರಂಪರೆಯ ಅನೇಕಾನೇಕ ಸಾಧಕರು ಈ ಕಲೆಯನ್ನು ಪ್ರಚುರಪಡಿಸುವಲ್ಲಿ ವ್ಯಾಪಕ ಚಟುವಟಿಕೆ ನಡೆಸಿದ್ದಾರೆ ಎಂದವರು ನೆನಪಿಸಿ 1960-70ರ ದಶಕದ ಹಿರಿಯರನ್ನು ನೆನಪಿಸಿಕೊಂಡರು.
ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಗಮಕ ಕಲೆಯ ಮೂಲಕ ಹೊಸ ತಲೆಮಾರು ಮುನ್ನೆಲೆಗೆ ತರುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಮುಂದಿನ ಶ್ರಾವಣ ಮಾಸದ ಕಾರ್ಯಕ್ರಮವನ್ನು ಮಕ್ಕಳನ್ನೇ ಲಕ್ಷ್ಯವಾಗಿರಿಸಿ ಮಾಡಲಾಗುವುದು ಎಂದು ತಿಳಿಸಿದರು.
ಕಲಾಕುಂಚ ಸಾಹಿತ್ಯ, ಸಾಂಸ್ಕøತಿಕ ಸಂಘಟನೆ ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷೆ ಜಯಲಕ್ಷ್ಮೀ ಕಾರಂತ ಮಂಗಲ್ಪಾಡಿ ಉಪಸ್ಥಿತರಿದ್ದು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಜಯಲಕ್ಷ್ಮೀ ಆರ್.ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ರಾಜಾರಾಮ ರಾವ್.ಮೀಯಪದವು ವಂದಿಸಿದರು. ಚೇತನ ಹೆಬ್ಬಾರ್ ಹಾಗೂ ದಿವ್ಯಾ ಕಾರಂತ, ವೇದಾಂತ ಕಾರಂತ ಅವರು ಗಮಕ-ಕಾವ್ಯ ವಾಚನ ನಡೆಸಿದರು.

.jpg)
.jpg)
