ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸಿದ ನೀಟ್- ಯುಜಿ 2026ರ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಬಿಐ ಬುಧವಾರ ಪುಣೆಯ ಪ್ರಮುಖ ತರಬೇತಿ ಕೇಂದ್ರ, ಡಾ. ಅಭಂಗ್ ಪ್ರಭು ಮೆಡಿಕಲ್ ಅಕಾಡೆಮಿಯ (ಎಪಿಎಂಎ) ವೈದ್ಯ ಹಾಗೂ ಭೌತವಿಜ್ಞಾನ ಉಪನ್ಯಾಸಕಿಯನ್ನು ಬಂಧಿಸಿದೆ.
ಲಾತೂರ್ ಮೂಲದ ವೈದ್ಯ ಮನೋಜ್ ಶಿರೂರೆ ಮತ್ತು ಉಪನ್ಯಾಸಕಿ ತೇಜಸ್ ಹರ್ಷದ್‌ಕುಮಾರ್ ಶಾ ಬಂಧಿತ ಆರೋಪಿಗಳು.
ಡಾ. ಮನೋಜ್ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಜಾಲದ ಪ್ರಮುಖ ಆರೋಪಿ ಪಿ.ವಿ ಕುಲಕರ್ಣಿ ಅವರಿಂದ ರಸಾಯನವಿಜ್ಞಾನದ ಪ್ರಶ್ನೆಪತ್ರಿಕೆ ಪಡೆದು, ಅದನ್ನು ತರಬೇತಿ ಕೇಂದ್ರದ ಮಾಲೀಕನ ಪುತ್ರ ಹಾಗೂ ಅಲ್ಲಿನ ಇಬ್ಬರು ವಿದ್ಯಾರ್ಥಿಗಳಿಗೆ ಪೂರೈಸಿರುವುದು ಸಿಬಿಐ ತನಿಖೆಯಲ್ಲಿ ತಿಳಿದುಬಂದಿದೆ. ಈಗಾಗಲೇ ಸಿಬಿಐ ಬಂಧಿಸಿರುವ ಆರೋಪಿ ಮನೀಶಾ ಹವಾಲ್ದಾರ್ ಅವರಿಂದ ಭೌತವಿಜ್ಞಾನ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದ ಆರೋಪವನ್ನು ತೇಜಸ್ ಹರ್ಷದ್‌ಕುಮಾರ್ ಎದುರಿಸುತ್ತಿದ್ದಾರೆ.
ಇವರ ಬಂಧನದ ಮೂಲಕ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ಇದುವರೆಗೆ ಬಂಧಿಸಿದ ಆರೋಪಿಗಳ ಸಂಖ್ಯೆ 13ಕ್ಕೆ ಏರಿದೆ.
ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಕುಲಕರ್ಣಿ ಅವರನ್ನು ಬಂಧಿಸಿದೆ. ಪ್ರಾಣಿವಿಜ್ಞಾನ ಮತ್ತು ಸಸ್ಯವಿಜ್ಞಾನ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಆರೋಪದಡಿ ಮನೀಶಾ ಗುರುನಾಥ್ ಮಂಧಾರೆ ಅವರನ್ನೂ ವಶಕ್ಕೆ ಪಡೆಯಲಾಗಿದೆ. ಇದುವರೆಗೆ ದೇಶದ 49 ಕಡೆಗಳಲ್ಲಿ ಶೋಧ ನಡೆಸಲಾಗಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ನೀಟ್- ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು, ರಾಜಸ್ಥಾನ ಪೊಲೀಸರ ವಿಶೇಷ ತನಿಖಾ ತಂಡದಿಂದ ಸಿಬಿಐಗೆ ಮೇ 12ರಂದು ಹಸ್ತಾಂತರಿಸಲಾಗಿತ್ತು.

