ಲಖನೌ: ಮಳೆ ಹಿನ್ನೆಲೆಯಲ್ಲಿ ತನ್ನ ಮನೆಯ ಮುಂಭಾಗದ ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದನ್ನು ಕಂಡು ಬೇಸತ್ತ ಆರು ವರ್ಷದ ಬಾಲಕಿಯೊಬ್ಬಳು, ಜಿಲ್ಲಾಧಿಕಾರಿಗೆ ವಿಡಿಯೊ ಮೂಲಕ ಮಾಡಿದ್ದ ಮನವಿ ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಬಾಲಕಿಯ ಈ ಮುಗ್ಧ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ದುರಸ್ತಿಗೆ ಆದೇಶಿಸಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯ ಒಂದನೇ ತರಗತಿ ವಿದ್ಯಾರ್ಥಿನಿ ಮಾನವಿ ಸಿಂಗ್ ಇಂತಹದೊಂದು ಸಾಹಸ ಮಾಡಿದ ಬಾಲಕಿ. ನೀರು ತುಂಬಿದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ ವಿಡಿಯೊ ಮಾಡಿದ್ದ ಅವಳು, ಅದನ್ನು ಜಿಲ್ಲಾಧಿಕಾರಿಗಳಿಗೆ ಟ್ಯಾಗ್ ಮಾಡಿ 'ಡಿಎಂ ಅಂಕಲ್' ಎಂದು ಮಾತನ್ನು ಶುರು ಮಾಡಿದಳು.
ವಿಡಿಯೊದಲ್ಲಿ ಬಾಲಕಿ ಹೇಳಿದ್ದೇನು?
'ಡಿಎಂ ಅಂಕಲ್.. ನೀವು ತುಂಬಾ ಒಳ್ಳೆಯವರು. ದಯವಿಟ್ಟು ನನ್ನ ಮನೆಯ ಮುಂದಿರುವ ಈ ರಸ್ತೆಯನ್ನು ಸರಿಪಡಿಸಿಕೊಡಿ' ಎಂದು ಮಾನವಿ ವಿಡಿಯೊದಲ್ಲಿ ವಿನಂತಿಸಿಕೊಂಡಿದ್ದಳು. ರಸ್ತೆಯಲ್ಲಿ ನೀರಿನಿಂದ ತುಂಬಿಕೊಂಡ ದೃಶ್ಯಗಳನ್ನು ಬಾಲಕಿ ವಿಡಿಯೊದಲ್ಲಿ ತೋರಿಸಿದ್ದಳು.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಜಿಲ್ಲಾಧಿಕಾರಿ ಅಂಜನಿ ಕುಮಾರ್ ಸಿಂಗ್ ಅವರ ಗಮನ ಸೆಳೆಯಿತು. ಮಗುವಿನ ಪ್ರಾಮಾಣಿಕ ಮನವಿಗೆ ಮಣಿದ ಜಿಲ್ಲಾಧಿಕಾರಿಗಳು, ಕೂಡಲೇ ಅಧಿಕಾರಿಗಳ ತಂಡದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದರು. ಮಾನವಿ ಮತ್ತು ಆಕೆಯ ಪೋಷಕರನ್ನು ಭೇಟಿ ಮಾಡಿದ ಅವರು, ರಸ್ತೆ ದುರಸ್ತಿ ಮಾಡುವ ಭರವಸೆ ನೀಡಿದರು.
ಅಲ್ಲದೆ, ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣವೇ ರಸ್ತೆ ಕಾಮಗಾರಿ ಆರಂಭಿಸುವಂತೆ ಆದೇಶಿಸಿದರು. ಮಳೆನೀರು ಮತ್ತು ಚರಂಡಿ ನೀರಿನಿಂದ ಹದಗೆಟ್ಟಿದ್ದ ರಸ್ತೆಯಿಂದ ನಿವಾಸಿಗಳು ಪಡುತ್ತಿದ್ದ ಕಷ್ಟಕ್ಕೆ ಈ ಪುಟ್ಟ ಬಾಲಕಿಯ ಮೂಲಕ ಮುಕ್ತಿ ಸಿಕ್ಕಂತಾಗಿದೆ.

