ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್ ನಿಂದ ನಿರಾಶ್ರಿತರಿಗೆ ಸುರಕ್ಷಿತ ವಸತಿ ಒದಗಿಸುವ ನಿಟ್ಟಿನಲ್ಲಿ 'ಶ್ರೀ ಭವನಂ' ಯೋಜನೆಯನ್ನು ಚೀಮೇನಿಯಲ್ಲಿ ಆರಂಭಿಸಲಾಯಿತು. ಸಂಪೂರ್ಣ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಜಾರಿಗೆ ತರಲಾಗುತ್ತಿರುವ ಈ ಮಾದರಿ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆ ಮತ್ತು ಮೊದಲ ಮನೆಯ ಶಿಲಾನ್ಯಾಸವನ್ನು ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ರತೀಶ್ ಪಿಲಿಕೋಡ್ ನೆರವೇರಿಸಿದರು. ಸಿಡಿಎಸ್ ಅಧ್ಯಕ್ಷೆ ವಿ.ಕೆ. ಶೋಭನಾ ಅಧ್ಯಕ್ಷತೆವಹಿಸಿದ್ದರು. ಚೀಮೇನಿ ಗ್ರಾಪಂ ಉಪಾಧ್ಯಕ್ಷ ವಿ.ವಿ. ಜನಾರ್ದನನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ರಜನಿ, ಟಿ.ಕೆ. ದಿವಾಕರನ್, ವಾರ್ಡ್ ಸದಸ್ಯ ಎ.ವಿ. ಲಲಿತಾ, ಬ್ಲಾಕ್ ಸದಸ್ಯ ಪಿ.ವಿ. ಶೀಬಾ, ಬ್ಲಾಕ್ ಸಂಯೋಜಕಿ ದಿವ್ಯಾ, ಪಿ.ರಾಜು, ಅನಿತಾ, ವಿಜಿಶಾ, ಅಶ್ವಿನಿ ಉಪಸ್ಥಿತರಿದ್ದರು.
ಕುಟುಂಬಶ್ರೀ ಸದಸ್ಯರಿಂದ ದಿನಕ್ಕೆ ಕನಿಷ್ಠ ಒಂದು ರೂಪಾಯಿಯನ್ನು ನೂರು ದಿವಸಗಳ ಕಾಲ ಮೀಸಲಿಡುವ ಮೂಲಕ ಯೋಜನೆಗಾಗಿ ಹಣವನ್ನು ಸಂಗ್ರಹಿಸಲಾಗುತ್ತಿದೆ. ಒಂದು ಸಿಡಿಎಸ್‍ನಲ್ಲಿ ಸರಾಸರಿ 4,500 ಸದಸ್ಯರು ಸುಮಾರು ನಾಲ್ಕೂವರೆ ಲಕ್ಷ ರೂಪಾಯಿಗಳನ್ನು ಸಂಗ್ರಹಿಸುವ ಗುರಿಯನ್ನು ಯೋಜನೆ ಹೊಂದಿದೆ. ಅಲ್ಲದೆ, ನಿರ್ಮಾಣ ಸಾಮಗ್ರಿಗಳನ್ನು ಪ್ರಾಯೋಜಕರು ಮತ್ತು ವಿವಿಧ ಕಾರ್ಮಿಕ ಸಂಘಟನೆಗಳ ಕೊಡುಗೆಯಾಗಿ ಸ್ವೀಕರಿಸಲಾಗುತ್ತಿದೆ. ನಿರ್ಮಾಣಕಾರ್ಯಗಳಿಗೆ ಕಾರ್ಮಿಕರ ಸೇವೆಯನ್ನು ಶ್ರಮದಾನದ ಮೂಲಕ ನಡೆಸುವ ಯೋಜನೆಯಿರಿಸಿಕೊಳ್ಳಲಾಗಿದೆ. ಸಿವಿಲ್ ಎಂಜಿನಿಯರ್‍ಗಳ ಸ್ವಯಂಪ್ರೇರಿತ ಸೇವೆಗಳನ್ನು ಖಚಿತಪಡಿಸಿಕೊಳ್ಳುವುದು ಮತ್ತು ಆಕರ್ಷಕ ಯೋಜನೆಗಳು ಮತ್ತು ವಿನ್ಯಾಸಗಳನ್ನು ಉಚಿತವಾಗಿ ಒದಗಿಸುವ ಮೂಲಕ, ನಿರ್ಮಾಣ ವೆಚ್ಚವನ್ನು ಗಣನೀಯವಾಗಿ ಕಡಿಮೆಮಾಡುವುದೂ ಯೋಜನೆ ಉದ್ದೇಶವಾಗಿದೆ ಎಂದು ಸಿಡಿಎಸ್ ಅಧ್ಯಕ್ಷೆ ವಿ.ಕೆ. ಶೋಭನಾ ತಿಳಿಸಿದ್ದಾರೆ.
ಸ್ಥಳೀಯಾಡಳಿತ ಸಂಸ್ಥೆಗಳು ಅನುಮೋದಿಸಿದ ಲೈಫ್ ಮಿಷನ್ ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಲಾಗಿದ್ದರೂ, ವಿವಿಧ ತಾಂತ್ರಿಕ ಮಾನದಂಡಗಳಿಂದಾಗಿ ಮನೆ ಪಡೆಯಲು ಸಾಧ್ಯವಾಗದವರನ್ನು ಈ ಯೋಜನೆಗೆ ಪರಿಗಣಿಸಲಾಗುತ್ತದೆ. ವಿಧವೆಯರು, ಪತಿಯಿಂದ ಬೇರ್ಪಟ್ಟವರು, ಬೆಂಬಲವಿಲ್ಲದ ಹಿರಿಯ ನಾಗರಿಕರು, ಮಾನಸಿಕ ಮತ್ತು ದೈಹಿಕ ಸವಾಲುಗಳನ್ನು ಎದುರಿಸುತ್ತಿರುವವರು ಮತ್ತು ವಾರ್ಷಿಕ 1 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ನಿರಾಶ್ರಿತರಿಗೆ ಯೋಜನೆಯಲ್ಲಿ ಆದ್ಯತೆ ನೀಡಲಾಗುತ್ತದೆ.
ವಾರ್ಡ್ ಸಮಿತಿಗಳು ಮತ್ತು ಸಿಡಿಎಸ್ ಪರಿಶೀಲನೆಗಳ ಮೂಲಕ ವಿಶೇಷ ತಪಾಸಣೆಯ ನಂತರ ಅತ್ಯಂತ ಅರ್ಹ ಫಲಾನುಭವಿಗಳನ್ನು ನಿರ್ಧರಿಸಲಾಗುತ್ತದೆ. ಜಿಲ್ಲೆಯಲ್ಲಿ 'ಶ್ರೀ ಭವನಂ' ವಸತಿ ಯೋಜನೆಯ ಮೊದಲ ಫಲಾನುಭವಿಯಾಗಿ ಚೀಮೇನಿ ತುರವ ನಿವಾಸಿ, 42 ವರ್ಷದ ದೃಷ್ಟಿಹೀನ ಮಹಿಳೆ ಚಂದ್ರಕಲಾ ಮನೋಜ್ ಆಯ್ಕೆಯಾಗಿದ್ದಾರೆ.

