ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ವಿ.ಡಿ. ಸತೀಶನ್ ಅವರು ತಾವು ಯಾವುದೇ ರೀತಿಯ ಅದ್ದೂರಿತನ ಅಥವಾ ಐಷಾರಾಮಿ ವ್ಯವಸ್ಥೆಗಳ ಮೊರೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಕನಿಷ್ಠ ಭದ್ರತೆ ಮಾತ್ರ ಒದಗಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಪ್ರಸ್ತುತ ರಾಜ್ಯವು ಆರ್ಥಿಕ ಸಂಕಷ್ಟದಲ್ಲಿದೆ. ಆದ್ದರಿಂದ ಸರ್ಕಾರದಿಂದ ಯಾವುದೇ ರೀತಿಯ ಐಷಾರಾಮಿ ವೆಚ್ಚಗಳನ್ನು ಭರಿಸಲು ಸಾಧ್ಯವಿಲ್ಲ. ಹಾಗಾಗಿ ನಾನು ಈಗ ಲಭ್ಯವಿರುವ ವಾಹನಗಳನ್ನೇ ಬಳಸಲಿದ್ದೇನೆ' ಎಂದು ತಿಳಿಸಿದ್ದಾರೆ.
ಪೊಲೀಸ್ ಮತ್ತು ಭದ್ರತಾ ಅಧಿಕಾರಿಗಳು ಮುಖ್ಯಮಂತ್ರಿಗೆ 'ಝಡ್-ಪ್ಲಸ್' ಭದ್ರತೆ ಇರುತ್ತದೆ ಎಂದರೂ, ತಮಗೆ ಕನಿಷ್ಠ ಭದ್ರತೆ ಸಾಕು ಎಂದು ಹೇಳಿರುವ ಸತೀಶನ್, 'ನನಗೆ ಝೀರೋ ಟ್ರಾಫಿಕ್ ಬೇಕಾಗಿಲ್ಲ ಎಂದು ಪೊಲೀಸರಿಗೆ ಸೂಚಿಸಿದ್ದೇನೆ. ರಸ್ತೆ ತಡೆ ಮಾಡುವುದರಿಂದ ಜನರಲ್ಲಿ ಅಸಮಾಧಾನ ಮೂಡುತ್ತದೆ' ಎಂದಿದ್ದಾರೆ.
ರಾಜ್ಯವು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದಾಗಲೂ ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರು ಐಷಾರಾಮಿ ಕಾರುಗಳನ್ನು ಖರೀದಿಸಿದ್ದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅಲ್ಲದೆ ವಿಜಯನ್ ಸಂಚಾರಕ್ಕಾಗಿ ಪೊಲೀಸರು ರಸ್ತೆಗಳನ್ನು ತಡೆಯುತ್ತಿದ್ದುದು ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸತೀಶನ್ ಅವರ ನಿರ್ಧಾರ ಮಹತ್ವ ಪಡೆದಿವೆ.
ಈ ಎಲ್ಲ ಬೆಳವಣಿಗೆಗ ನಡುವೆ ಸತೀಶನ್ ಅವರು ತಿರುವನಂತಪುರದಲ್ಲಿರುವ ಪಿಣರಾಯಿ ವಿಜಯನ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಸೋಮವಾರ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ವಿಜಯನ್ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಸತೀಶನ್ ತಿಳಿಸಿದ್ದಾರೆ.
ಕೇರಳಂನ ಮುಂದಿನ ಮುಖ್ಯಮಂತ್ರಿಯಾಗಿ ಆರು ಬಾರಿಯ ಶಾಸಕ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಗುರುವಾರ ಹೆಸರಿಸಿದೆ. ಈ ಮೂಲಕ ಹಲವು ದಿನಗಳಿಂದ ಮೂಡಿದ್ದ ಅನಿಶ್ಚಿತತೆ ಹಾಗೂ ಊಹಾಪೋಹಗಳಿಗೆ ಕೊನೆಗೂ ತೆರೆ ಎಳೆದಿದೆ.
ಪಕ್ಷದ ಹಿರಿಯ ನಾಯಕರಾದ ಕೆ.ಸಿ. ವೇಣುಗೋಪಾಲ್, ರಮೇಶ್ ಚೆನ್ನಿತ್ತಲ ಹಾಗೂ ವಿರೋಧ ಪಕ್ಷದ ನಾಯಕರಾಗಿದ್ದ ಸತೀಶನ್ ಅವರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದರು. 61 ವರ್ಷ ವಯಸ್ಸಿನ ಸತೀಶನ್ ಅವರಿಗಿರುವ ಸಾರ್ವಜನಿಕ ಬೆಂಬಲ ಹಾಗೂ ಕಳೆದ ಐದು ವರ್ಷಗಳಲ್ಲಿ ವಿಪಕ್ಷ ನಾಯಕರಾಗಿ ಅವರು ಸಮರ್ಥವಾಗಿ ಕಾರ್ಯನಿರ್ವಹಿಸಿರುವುದನ್ನು ಪರಿಗಣಿಸಿ ಅವರನ್ನು ಆಯ್ಕೆ ಮಾಡಲಾಗಿದೆ.
140 ಸದಸ್ಯ ಬಲದ ಕೇರಳಂ ವಿಧಾನಸಭೆಯಲ್ಲಿ ಯುಡಿಎಫ್ ಮೈತ್ರಿಕೂಟ 102 ಸ್ಥಾನಗಳಲ್ಲಿ ಗೆಲುವು ಗಳಿಸಿದೆ. ಈ ಪೈಕಿ ಕಾಂಗ್ರೆಸ್ 63 ಶಾಸಕರನ್ನು ಹೊಂದಿದೆ. ಅದರ ಮಿತ್ರಪಕ್ಷಗಳಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) 22, ಕೇರಳ ಕಾಂಗ್ರೆಸ್ (ಕೆಇಸಿ) ಎಂಟು ಮತ್ತು ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ (ಆರ್‌ಎಸ್‌ಪಿ) ಮೂರು ಶಾಸಕರನ್ನು ಹೊಂದಿವೆ.

