ಕೋಲ್ಕತ್ತ: ಪಶ್ಚಿಮ ಬಂಗಾಳದ ಎಲ್ಲ ಮದರಸಾಗಳಲ್ಲಿ ಇಂದಿನಿಂದಲೇ ಜಾರಿಗೆ ಬರುವಂತೆ ಪ್ರಾರ್ಥನಾ ಸಮಯದಲ್ಲಿ 'ವಂದೇ ಮಾತರಂ' ಹಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಶಾಲೆಗಳು ಆರಂಭವಾಗುವ ಮುನ್ನ ನಡೆಯುವ ಸಾಮೂಹಿಕ ಪ್ರಾರ್ಥನೆ ಸಮಯದಲ್ಲಿ 'ವಂದೇ ಮಾತರಂ' ಹಾಡುವುದನ್ನು ಇಂದಿನಿಂದಲೇ ಕಡ್ಡಾಯಗೊಳಿಸಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ರಾಜ್ಯದ ಎಲ್ಲಾ ಶಾಲೆಗಳಲ್ಲಿ 'ವಂದೇ ಮಾತರಂ' ಹಾಡುವುದನ್ನು ಕಡ್ಡಾಯಗೊಳಿಸಿದ ಕೇವಲ ಒಂದು ವಾರದ ಬೆನ್ನಲ್ಲೇ, ಮದರಸಾ ಶಿಕ್ಷಣ ಇಲಾಖೆ ಈ ಹೊಸ ಆದೇಶ ಹೊರಡಿಸಿದೆ.
ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಮದರಸಾಗಳು, ಸರ್ಕಾರಿ ಅನುದಾನಿತ ಮದರಸಾಗಳು, ಸರ್ಕಾರದಿಂದ ಅನುಮೋದಿತ ಶಿಶು ಶಿಕ್ಷಣ ಕೇಂದ್ರಗಳು, ಮಾಧ್ಯಮಿಕ ಶಿಕ್ಷಣ ಕೇಂದ್ರಗಳು, ಮಾನ್ಯತೆ ಪಡೆದ ಅನುದಾನರಹಿತ ಮದರಸಾಗಳಿಗೆ ಈ ನಿರ್ದೇಶನ ಅನ್ವಯಿಸಲಿದೆ.
ಪ್ರಾರ್ಥನೆಯಲ್ಲಿ ಏಕರೂಪತೆ ತರುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರ್ಕಾರ ಆದೇಶವನ್ನು ಹೊರಡಿಸಲಾಗಿದ್ದು, ಇದನ್ನು ತಕ್ಷಣದಿಂದಲೇ ಜಾರಿಗೆ ತರಬೇಕು ಎಂದು ಅವರು ತಿಳಿಸಿದ್ದಾರೆ.
ಶಾಲೆಗಳಲ್ಲಿ ಕಡ್ಡಾಯ: ಕಳೆದ ವಾರವಷ್ಟೇ (ಮೇ 13), ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆಯ ವೇಳೆ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿತ್ತು. ಶಾಲೆ ಆರಂಭದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಗಾಯನದಲ್ಲಿ ಭಾಗವಹಿಸಬೇಕು ಮತ್ತು ಎಲ್ಲಾ ಶಾಲಾ ಮುಖ್ಯಸ್ಥರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿತ್ತು.

