ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 35ನೇ ಪುಣ್ಯಸ್ಮರಣೆ ದಿನವಾದ ಇಂದು (ಮೇ 21) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ರಾಜೀವ್ ಗಾಂಧಿ ಅವರೊಂದಿಗಿನ ಅಪರೂಪದ ಚಿತ್ರವನ್ನು ರಾಹುಲ್, ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಹಂಚಿಕೊಂಡಿದ್ದಾರೆ.
'ಅಪ್ಪಾ, ನೀವು ಕಂಡ ಕೌಶಲ್ಯಪೂರ್ಣ, ಸಮೃದ್ಧ ಮತ್ತು ಬಲಿಷ್ಠ ಭಾರತದ ಕನಸನ್ಸು ನನಸಾಗಿಸುವ ಜಬಾವ್ದಾರಿಯನ್ನು ನಾನು ಸಂಪೂರ್ಣವಾಗಿ ಹೊರುತ್ತೇನೆ. ನಿಮ್ಮ ಬೋಧನೆಗಳು, ಮೌಲ್ಯಗಳು ಮತ್ತು ನೆನಪುಗಳು ಎಂದೆಂದಿಗೂ ನನ್ನೊಂದಿಗೆ ಇರುತ್ತದೆ' ಎಂದು ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹುತಾತ್ಮ ರಾಜೀವ್ ಗಾಂಧಿ ಅವರ ಮಾತುಗಳನ್ನು ಸ್ಮರಿಸಿದ್ದಾರೆ. 'ಭಾರತ ಹಳೆಯ ದೇಶವಾಗಿದ್ದರೂ ಯುವ ರಾಷ್ಟ್ರವಾಗಿದೆ. ಬಲಿಷ್ಠ, ಸ್ವತಂತ್ವ, ಸ್ವಾವಲಂಬಿ ಮತ್ತು ಜಗತ್ತಿನ ರಾಷ್ಟ್ರಗಳಲ್ಲಿ ಹಾಗೂ ಮನುಕಲದ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಭಾರತ ದೇಶದ ಕನಸು ಕಾಣುತ್ತೇನೆ' ಎಂದು ಹೇಳಿದ್ದಾರೆ.
ರಾಜೀವ್ ಗಾಂಧಿ, ಮುಂಬೈಯಲ್ಲಿ 1944ರ ಆಗಸ್ಟ್ 20ರಂದು ಜನಿಸಿದರು. 1991ರ ಮೇ 21ರಂದು ತಮಿಳಿನಾಡಿನಲ್ಲಿ ಹತ್ಯೆಗೀಡಾದರು. 1984ರಿಂದ 1989ರವರೆಗೆ ಭಾರತದ ಪ್ರಧಾನಿಯಾಗಿದ್ದರು.

