ಇಂದಿನ ಡಿಜಿಟಲ್ ಜಗತ್ತಿನಲ್ಲಿ ನಾವೆಲ್ಲರೂ ನಾರ್ಮಲ್ ಆಡಿಯೋ ಕರೆಗಳಿಗಿಂತ ಹೆಚ್ಚಾಗಿ ವಾಟ್ಸಾಪ್ (WhatsApp) ಮೂಲಕವೇ ಆಡಿಯೋ ಮತ್ತು ವಿಡಿಯೋ ಕರೆಗಳನ್ನು ಮಾಡಲು ಇಷ್ಟಪಡುತ್ತೇವೆ. ಸಾಮಾನ್ಯವಾಗಿ ಎಲ್ಲ ಮೊಬೈಲ್‌ಗಳಲ್ಲೂ ನಾರ್ಮಲ್ ಕರೆಗಳನ್ನು ರೆಕಾರ್ಡ್ (Call Record) ಮಾಡುವ ಇನ್‌ಬಿಲ್ಟ್ ಅವಕಾಶ ಇರುತ್ತದೆ.
ಆದರೆ ಸುರಕ್ಷತೆಯ ಕಾರಣಗಳಿಂದಾಗಿ ವಾಟ್ಸಾಪ್ ಕರೆಗಳನ್ನು ನೇರವಾಗಿ ರೆಕಾರ್ಡ್ ಮಾಡಲು ಸಾಧ್ಯವಾಗುವುದಿಲ್ಲ.
ಆದರೆ, ದೈನಂದಿನ ಜೀವನದಲ್ಲಿ ಕೆಲವು ಪ್ರಮುಖ ಕಾರಣಗಳಿಗಾಗಿ ವಾಟ್ಸಾಪ್ ಕಾಲ್ ರೆಕಾರ್ಡ್ ಮಾಡುವುದು ಅನಿವಾರ್ಯವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಲವು ಸಿಂಪಲ್ ಟ್ರಿಕ್ಸ್ ಬಳಸುವ ಮೂಲಕ ವಾಟ್ಸಾಪ್ ಕರೆಗಳನ್ನು ಕೂಡ ಸುಲಭವಾಗಿ ರೆಕಾರ್ಡ್ ಮಾಡಬಹುದು. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೆಚ್ಚಿನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಬಿಲ್ಟ್ ಆಗಿ 'ಸ್ಕ್ರೀನ್ ರೆಕಾರ್ಡರ್' (Screen Recorder) ಫೀಚರ್ ನೀಡಲಾಗಿರುತ್ತದೆ. ಇದರ ಸಹಾಯದಿಂದ ವಾಟ್ಸಾಪ್ ಕರೆಗಳನ್ನು ಸುಲಭವಾಗಿ ರೆಕಾರ್ಡ್ ಮಾಡಬಹುದು. ವಾಟ್ಸಾಪ್ ಕಾಲ್ ಮಾಡುವ ಮುನ್ನ ಫೋನ್‌ನ ನೋಟಿಫಿಕೇಶನ್ ಬಾರ್‌ನಲ್ಲಿರುವ ಸ್ಕ್ರೀನ್ ರೆಕಾರ್ಡರ್ ಓಪನ್ ಮಾಡಬೇಕು. ಅಲ್ಲಿ 'ರೆಕಾರ್ಡ್ ಆಡಿಯೋ' ಅಥವಾ ಮೈಕ್ರೊಫೋನ್ ಆಪ್ಷನ್ ಆನ್ ಇದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.
ಆ ನಂತರ ವಾಟ್ಸಾಪ್ ಕಾಲ್ ಮಾಡಿದರೆ ಇಡೀ ಸಂಭಾಷಣೆ ರೆಕಾರ್ಡ್ ಆಗುತ್ತದೆ. ಕರೆ ಮುಗಿದ ನಂತರ ಈ ರೆಕಾರ್ಡಿಂಗ್ ನೇರವಾಗಿ ನಿಮ್ಮ ಗ್ಯಾಲರಿಯಲ್ಲಿ ವಿಡಿಯೋ ರೂಪದಲ್ಲಿ ಸೇವ್ ಆಗುತ್ತದೆ. ಕೆಲವು ಫೋನ್‌ಗಳಲ್ಲಿ ಇಂಟರ್ನಲ್ ಆಡಿಯೋ ಸರಿಯಾಗಿ ರೆಕಾರ್ಡ್ ಆಗದಿದ್ದರೆ, ಕರೆಯ ಸಮಯದಲ್ಲಿ ಮೊಬೈಲ್ ಸ್ಪೀಕರ್ ಆನ್ ಮಾಡಿ ರೆಕಾರ್ಡ್ ಮಾಡಬೇಕಾಗುತ್ತದೆ.
ಪ್ಲೇ ಸ್ಟೋರ್ ಅಪ್ಲಿಕೇಷನ್‌ಗಳನ್ನು ಬಳಸುವಾಗ ಇರಲಿ ಎಚ್ಚರ..
ಕೆಲವು ಮೊಬೈಲ್‌ಗಳಲ್ಲಿ ಇನ್‌ಬಿಲ್ಟ್ ಸ್ಕ್ರೀನ್ ರೆಕಾರ್ಡರ್ ಇಲ್ಲದಿದ್ದರೆ ಅಥವಾ ಅದು ಸರಿಯಾಗಿ ಕೆಲಸ ಮಾಡದಿದ್ದರೆ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಥರ್ಡ್ ಪಾರ್ಟಿ ಕಾಲ್ ರೆಕಾರ್ಡಿಂಗ್ ಆಯಪ್‌ಗಳನ್ನು ಬಳಸಬಹುದು. ಈ ಆಯಪ್‌ಗಳು ಸ್ಕ್ರೀನ್ ವಿಡಿಯೋ ಜೊತೆಗೆ ಕಾಲ್ ಆಡಿಯೋವನ್ನು ಅತ್ಯಂತ ಸ್ಪಷ್ಟವಾಗಿ ಸೇವ್ ಮಾಡುತ್ತವೆ.
ಆದರೆ, ಇಂತಹ ಯಾವುದೇ ಆಯಪ್ ಡೌನ್‌ಲೋಡ್ ಮಾಡುವ ಮೊದಲು ಅದರ ಪ್ರೈವೆಸಿ ಪಾಲಿಸಿ ಮತ್ತು ಅದು ಕೇಳುವ ಪರ್ಮಿಷನ್‌ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಕಡ್ಡಾಯ. ಏಕೆಂದರೆ ಪ್ಲೇ ಸ್ಟೋರ್‌ನಲ್ಲಿರುವ ಕೆಲವು ನಕಲಿ ಆಯಪ್‌ಗಳು ನಿಮ್ಮ ಫೋನ್‌ನ ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕಿಂಗ್ ವಿವರಗಳನ್ನು ಕದಿಯುವ ಅಪಾಯವಿರುತ್ತದೆ.
ಐಫೋನ್‌ಗಳಲ್ಲಿ ವಾಟ್ಸಾಪ್ ಕಾಲ್ ರೆಕಾರ್ಡ್ ಮಾಡುವುದು ಹೇಗೆ?
ಆಯಪಲ್ ಕಂಪನಿಯ ಐಫೋನ್‌ಗಳಲ್ಲಿ (iPhone) ಭದ್ರತೆ ಮತ್ತು ಪ್ರೈವೆಸಿ ಅತ್ಯಂತ ಹೆಚ್ಚಾಗಿರುವುದರಿಂದ ಅದರಲ್ಲಿ ವಾಟ್ಸಾಪ್ ಕರೆಗಳನ್ನು ಸುಲಭವಾಗಿ ರೆಕಾರ್ಡ್ ಮಾಡಲು ಸಾಧ್ಯವೇ ಇಲ್ಲ. ಆದರೆ ಇದಕ್ಕೆ ಕೆಲವು ಪರ್ಯಾಯ ಮಾರ್ಗಗಳಿವೆ. ಐಫೋನ್ ಬಳಕೆದಾರರು ತಮ್ಮ ಮ್ಯಾಕ್‌ಬುಕ್ (MacBook) ಸಹಾಯದಿಂದ ಅಥವಾ ಇನ್ನೊಂದು ಮೊಬೈಲ್ ಬಳಸಿ ವಾಟ್ಸಾಪ್ ಕರೆಯನ್ನು ಸ್ಪೀಕರ್ ಮೋಡ್‌ನಲ್ಲಿ ಇಟ್ಟು ರೆಕಾರ್ಡ್ ಮಾಡಬಹುದು. ಹೀಗೆ ಬೇರೆ ಸಾಧನಗಳ ಮೂಲಕ ರೆಕಾರ್ಡ್ ಮಾಡಿದಾಗ ಆಡಿಯೋ ಗುಣಮಟ್ಟ (Audio Quality) ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
ಕಾಲ್ ರೆಕಾರ್ಡ್ ಮಾಡುವಾಗ ಈ ಜಾಗ್ರತೆ ಅತ್ಯಗತ್ಯ:
ಯಾರದ್ದೇ ಅನುಮತಿ ಇಲ್ಲದೆ ಅವರ ಕರೆಯನ್ನು ರಹಸ್ಯವಾಗಿ ರೆಕಾರ್ಡ್ ಮಾಡುವುದು ಕಾನೂನುಬಾಹಿರ ಹಾಗೂ ಪ್ರೈವೆಸಿ ಉಲ್ಲಂಘನೆಯಾಗುತ್ತದೆ. ಹಾಗಾಗಿ, ತೀರಾ ಅಗತ್ಯವಿದ್ದಾಗ ಮಾತ್ರ ಕರೆಗಳನ್ನು ರೆಕಾರ್ಡ್ ಮಾಡಿ. ವೈಯಕ್ತಿಕ ಗೌಪ್ಯತೆಯನ್ನು ಗೌರವಿಸಿ ಮತ್ತು ರೆಕಾರ್ಡ್ ಮಾಡಿದ ಫೈಲ್‌ಗಳನ್ನು ಅತ್ಯಂತ ಸುರಕ್ಷಿತವಾಗಿಡಿ. ನಿಮ್ಮ ಫೋನ್ ಬೇರೆಯವರ ಕೈಗೆ ಸಿಕ್ಕರೆ ಈ ರೆಕಾರ್ಡಿಂಗ್‌ಗಳು ದುರ್ಬಳಕೆಯಾಗುವ ಅಪಾಯವಿರುತ್ತದೆ. ಆದ್ದರಿಂದ ಕರೆ ರೆಕಾರ್ಡ್ ಮಾಡುವ ಮುನ್ನ ಎದುರಿನ ವ್ಯಕ್ತಿಯ ಒಪ್ಪಿಗೆ ಪಡೆಯುವುದು ಅತ್ಯಂತ ಸೂಕ್ತವಾದ ಮಾರ್ಗವಾಗಿದೆ.
ಪ್ರಸ್ತುತ ಮೆಟಾ (Meta) ಒಡೆತನದ ವಾಟ್ಸಾಪ್‌ನಲ್ಲಿ ಅಧಿಕೃತವಾಗಿ ಯಾವುದೇ ಕಾಲ್ ರೆಕಾರ್ಡಿಂಗ್ ಫೀಚರ್ ನೀಡಿಲ್ಲ. ಭವಿಷ್ಯದಲ್ಲಿ ಬಳಕೆದಾರರ ಬೇಡಿಕೆಗೆ ಅನುಗುಣವಾಗಿ ಇಂತಹ ಫೀಚರ್ ಬರಬಹುದು ಎಂದು ಟೆಕ್ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಅಲ್ಲಿಯವರೆಗೂ ಬಳಕೆದಾರರು ಸ್ಕ್ರೀನ್ ರೆಕಾರ್ಡರ್ ಅಥವಾ ಇತರೆ ಸುರಕ್ಷಿತ ಪರ್ಯಾಯ ಮಾರ್ಗಗಳನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ.

