ನವದೆಹಲಿ: ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜುಲೈ 1ರಿಂದ ಜಾರಿಗೆ ಬರಲಿರುವ ವಿಕಸಿತ್ ಭಾರತ್-ಉದ್ಯೋಗ ಖಾತರಿ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ, 2025 (ವಿಬಿ-ಜಿ ರಾಮ್ ಜಿ) ಅಡಿಯಲ್ಲಿ ಕೇಂದ್ರ ಸರಕಾರ ಶನಿವಾರ ಕರಡು ನಿಯಮಗಳನ್ನು ಸಾರ್ವಜನಿಕರ ಸಲಹೆಗಾಗಿ ಬಿಡುಗಡೆ ಮಾಡಿದೆ.
ಕಾಯ್ದೆಯ ಸೆಕ್ಷನ್ 33 ಮತ್ತು ಇತರ ನಿಬಂಧನೆಗಳ ಅಡಿಯಲ್ಲಿ ರೂಪಿಸಲಾದ ಈ ಕರಡು ನಿಯಮಗಳನ್ನು ಅಂತಿಮಗೊಳಿಸುವ ಮುನ್ನ ಸಂಬಂಧಿಸಿದವರಿಂದ ಪ್ರತಿಕ್ರಿಯೆ ಪಡೆಯಲು ಸಾರ್ವಜನಿಕ ವಲಯದಲ್ಲಿ ಇರಿಸಲಾಗಿದೆ.
ಪ್ರಸ್ತಾವಿತ ಚೌಕಟ್ಟು ಪರಿವರ್ತನಾ ನಿಬಂಧನೆಗಳು, ರಾಷ್ಟ್ರೀಯ ಚಾಲನಾ ಸಮಿತಿ, ಕೇಂದ್ರ ಗ್ರಾಮೀಣ ಉದ್ಯೋಗ ಖಾತರಿ ಮಂಡಳಿ, ಆಡಳಿತಾತ್ಮಕ ವೆಚ್ಚಗಳು, ಕುಂದುಕೊರತೆ ನಿವಾರಣೆ, ವೇತನ ಮತ್ತು ನಿರುದ್ಯೋಗ ಭತ್ಯೆ ಪಾವತಿ ಹಾಗೂ ಶಾಸಕಾಂಗ ರಹಿತ ಕೇಂದ್ರಾಡಳಿತ ಪ್ರದೇಶಗಳ ವೆಚ್ಚಗಳು ಸೇರಿದಂತೆ ನಿಗದಿತ ಹಂಚಿಕೆಗಿಂತ ಹೆಚ್ಚಿನ ವೆಚ್ಚಗಳನ್ನು ಒಳಗೊಂಡಿದೆ.
ಈ ನಿಯಮಗಳು ದೇಶಾದ್ಯಂತ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಅಗತ್ಯವಿರುವ ಸಾಂಸ್ಥಿಕ, ಆಡಳಿತಾತ್ಮಕ, ಆರ್ಥಿಕ ಮತ್ತು ಆಡಳಿತ ಚೌಕಟ್ಟನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿವೆ ಎಂದು ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಗಳು, ಸಂಸ್ಥೆಗಳು, ತಜ್ಞರು, ನಾಗರಿಕ ಸಮಾಜದ ಸಂಘಟನೆಗಳು ಮತ್ತು ಸಾರ್ವಜನಿಕರಿಂದ ರಚನಾತ್ಮಾಕ ಸಲಹೆಗಳನ್ನು ಪಡೆದು, ಎಲ್ಲರು ಒಳಗೊಳ್ಳುವ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಈ ಸಲಹಾ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರಡು ಪರಿವರ್ತನಾ ನಿಬಂಧನೆಗಳ ನಿಯಮಗಳು ಪ್ರಸ್ತುತ ಚಾಲ್ತಿಯಲ್ಲಿರುವ ಮನರೇಗಾ (ಎಂಜಿಎನ್‌ಆರ್‌ಇಜಿಎ)ಯೋಜನೆಯ ಸ್ಥಾನದಲ್ಲಿ ಅಸ್ತಿತ್ವಕ್ಕೆ ಬರಲಿರುವ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಾದ ವಿಜಿ-ರಾಮ್ ಜಿಯ ಬದಲಾಗುವ ಚೌಕಟ್ಟನ್ನು ತಿಳಿಸುತ್ತದೆ.

