ನವದೆಹಲಿ: ದೇಶದಾದ್ಯಂತ ಸೂರ್ಯನ ತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹಲವು ರಾಜ್ಯಗಳಲ್ಲಿ ತೀವ್ರ ಬಿಸಿಗಾಳಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಈ ಬಿಸಿಲು ಕೇವಲ ಚರ್ಮದ ಉರಿ ಅಥವಾ ಬಾಯಾರಿಕೆಗೆ ಸೀಮಿತವಾಗಿಲ್ಲ, ಇದು ನೇರವಾಗಿ ನಮ್ಮ ಮಿದುಳು ಮತ್ತು ಕಣ್ಣುಗಳ ಮೇಲೆಯೇ ಗಂಭೀರ ದುಷ್ಪರಿಣಾಮ ಬೀರುತ್ತಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ದೀರ್ಘಕಾಲ ಬಿಸಿಲಿನಲ್ಲಿ ಇರುವುದು ಕೇವಲ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ, ಕಣ್ಣುಗಳು ಮತ್ತು ನರಮಂಡಲ ಕಾರ್ಯನಿರ್ವಹಣೆಗೂ ಹಾನಿ ಉಂಟು ಮಾಡಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಈಗಾಗಲೇ ಬೇರೆ ಆರೋಗ್ಯ ಸಮಸ್ಯೆ ಇರುವವರ ಮೇಲೆ ಇದು ಹೆಚ್ಚು ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.
'ಹೆಚ್ಚುತ್ತಿರುವ ಬಿಸಿಲು, ನಿರ್ಜಲೀಕರಣ ಮತ್ತು ದೀರ್ಘಕಾಲ ಬಿಸಿಲಿನಲ್ಲಿ ಇರುವುದರಿಂದ ದೇಹದ ಸಮತೋಲನ ತಪ್ಪುತ್ತದೆ. ಇದರಿಂದ ತೀವ್ರ ಸುಸ್ತು, ತಲೆಸುತ್ತ, ತಲೆನೋವು, ಮೈಗ್ರೇನ್ ಹಾಗೂ ಹೀಟ್ ಸ್ಟ್ರೋಕ್ ಆಗಬಹುದು. ಈ ಪರಿಸ್ಥಿತಿಯು ದುರ್ಬಲ ಆರೋಗ್ಯ ಹೊಂದಿರುವವರಲ್ಲಿ ಮಿದುಳಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳನ್ನು ಕೂಡಾ ಉಂಟುಮಾಡಬಹುದು' ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ದೆಹಲಿಯಾದ್ಯಂತ ಇರುವ ಆಸ್ಪತ್ರೆಗಳಲ್ಲಿ ಬಿಸಿಲಿನಿಂದ ಬರುವ ಕಾಯಿಲೆಗಳ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮುಖ್ಯವಾಗಿ ಕಣ್ಣಿನ ಕಿರಿಕಿರಿ, ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಬರುವ ತಲೆನೋವು ಮತ್ತು ಬಿಸಿಲಿನ ತಾಪಮಾನದಿಂದ ಉಂಟಾಗುವ ಮಿದುಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
'ಕಳೆದ ಕೆಲವು ದಿನಗಳಿಂದ ಹೊರ ರೋಗಿಗಳಲ್ಲಿ ಸುಮಾರು ಶೇ. 20ರಷ್ಟು ಹೆಚ್ಚಳವಾಗಿದೆ. ತೀವ್ರ ತಲೆನೋವು, ತಲೆತಿರುಗುವಿಕೆ, ದಿಗ್ಬ್ರಮೆ, ಮೂರ್ಛೆ ಹೋಗುವುದು, ಈಗಾಗಲೆ ಇರುವ ನರಮಂಡಲ ಕಾಯಿಲೆ ಮತ್ತಷ್ಟು ಹದಗೆಡುವುದು ಮತ್ತು ವಿಶೇಷವಾಗಿ ಮೈಗ್ರೇನ್ ಉಲ್ಬಣಗಳಂತಹ ರೋಗಲಕ್ಷಣಗಳೊಂದಿಗೆ ಹೆಚ್ಚಿನ ಜನರು ಆಸ್ಪತ್ರೆಗೆ ಬರುತ್ತಿದ್ದಾರೆ' ಎಂದು ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಹಿರಿಯ ಸಲಹೆಗಾರ, ನರರೋಗ ತಜ್ಞ ಡಾ. ವಿನಿತ್ ಸೂರಿ ಹೇಳಿದ್ದಾರೆ.
ವೈದ್ಯರ ಸಲಹೆ
ಬಿಸಿಲಿನ ಬೇಗೆ ಎಲ್ಲರಿಗೂ ತಟ್ಟಿದರೂ ಮಕ್ಕಳು, ವೃದ್ಧರು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಅತ್ಯಂತ ಜಾಗರೂಕರಾಗಿರಬೇಕು ಎಂದು ವೈದ್ಯರು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.
ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಬೇಕು, ದಾಹವಿಲ್ಲದಿದ್ದರೂ ನಿಯಮಿತವಾಗಿ ನೀರು, ಎಳನೀರು, ಮಜ್ಜಿಗೆಯನ್ನು ಕುಡಿಯುತ್ತಿರಬೇಕು. ಹೊರಗೆ ಹೋಗುವಾಗ ಕಣ್ಣಿನ ರಕ್ಷಣೆಗಾಗಿ ಸನ್‌ಗ್ಲಾಸ್ (ಗಾಜಿನ ಕನ್ನಡಕ) ಮತ್ತು ತಲೆಗೆ ಟೋಪಿ ಅಥವಾ ಛತ್ರಿಯನ್ನು ಬಳಸಬೇಕು ಎಂದು ಸಲಹೆ ನೀಡಿದ್ದಾರೆ.
ಸುಸ್ತು ಅಥವಾ ತಲೆಸುತ್ತು ಕಾಣಿಸಿಕೊಂಡರೆ ತಕ್ಷಣ ತಂಪಾದ ಜಾಗಕ್ಕೆ ಹೋಗಬೇಕು. ನಂತರ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಬಿಸಿಲು ಕೇವಲ ಹವಾಮಾನದ ಬದಲಾವಣೆಯಲ್ಲ, ಅದು ನಮ್ಮ ಆರೋಗ್ಯದ ಮೇಲಿನ ಗಂಭೀರ ದಾಳಿ. ಸಣ್ಣ ನಿರ್ಲಕ್ಷ್ಯವೂ ದೊಡ್ಡ ಅಪಾಯಕ್ಕೆ ದಾರಿ ಮಾಡಿಕೊಡಬಹುದು, ಆದ್ದರಿಂದ ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಹೇಳಿದ್ದಾರೆ.

