ರಾಯ್ಬರೇಲಿ: ''ಆರ್ಥಿಕ ಆಘಾತ'' ಎದುರಾಗಲಿದೆ. ಇದು ಅದಾನಿ, ಅಂಬಾನಿ ಅಥವಾ ಮೋದಿ ಅವರಿಗೆ ಬಾಧಿಸುವುದಿಲ್ಲ. ಬದಲಿಗೆ ಯುವಕರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಪ್ರತಿಪಾದಿಸಿದ್ದಾರೆ.
''ತುಂಬಾ ಕಠಿಣ ದಿನಗಳು ಬರಲಿವೆ'' ಎಂದು ಅವರು ಇಲ್ಲಿ ಸುದ್ದಿಗಾರರೊಂದಿಗೆ ಹೇಳಿದರು.
ಅನೇಕ ವರ್ಷಗಳಿಂದ ಕಾಣದ ದೊಡ್ಡ ಆರ್ಥಿಕ ಆಘಾತ ಎದುರಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಪ್ರಧಾನಿ ಅವರು ತಮ್ಮದೇ ಆದ ಮಿತವ್ಯಯದ ಕರೆಗೆ ಬದ್ಧರಾಗಿಲ್ಲ ಎಂದು ಅವರು ಆರೋಪಿಸಿದರು.
''ಕ್ರಮ ಕೈಗೊಳ್ಳುವ ಬದಲು, ನರೇಂದ್ರ ಮೋದಿ ಅವರು ದೇಶದ ಜನರಿಗೆ ವಿದೇಶ ಪ್ರವಾಸಗಳಿಗೆ ಹೋಗದಂತೆ ಹೇಳುತ್ತಿದ್ದಾರೆ. ಆದರೆ, ಅವರು ಪ್ರಪಂಚದಾದ್ಯಂತ ಸುತ್ತುತ್ತಿದ್ದಾರೆ. ಇದು ಇಂದಿನ ಪರಿಸ್ಥಿತಿ'' ಎಂದು ರಾಹುಲ್ ಗಾಂಧಿ ಹೇಳಿದರು.
ರಾಯ್ಬರೇಲಿ ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ರಾಹುಲ್ ಗಾಂಧಿ ಮಂಗಳವಾರ ಲಕ್ನೋ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ನೇರವಾಗಿ ತಮ್ಮ ಕ್ಷೇತ್ರಕ್ಕೆ ತೆರಳಿದರು.
ವಿಮಾನ ನಿಲ್ದಾಣದಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ವರಿಷ್ಠ ಅಜಯ್ ರಾಯ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಆರಾಧನಾ ಮಿಶ್ರಾ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದರು.
ರಾಹುಲ್ ಗಾಂಧಿ ಅವರು ಪಕ್ಷದ ಭದ್ರ ಕೋಟೆಗಳಾದ ರಾಯ್ಬರೇಲಿ ಮತ್ತು ಅಮೇಠಿಗೆ ಎರಡು ದಿನಗಳ ಪ್ರವಾಸದಲ್ಲಿದ್ದಾರೆ.

