ಲುಧಿಯಾನ: ತಲೆಗೆ ಬಂದೂಕು ತೋರಿಸಿ ಅಪಹರಿಸಲಾಗಿದೆ ಎಂದು ಹೇಳಲಾಗಿದ್ದ ಪಂಜಾಬಿ ಗಾಯಕಿ ಯಶಿಂದರ್ ಕೌರ್ ಎಂದೂ ಕರೆಯಲಾಗುವ ಇಂದರ್ ಕೌರ್ ಆರು ದಿನಗಳ ಬಳಿಕ ಲೂಧಿಯಾನದ ನಾಲೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಇಂದರ್ ಕೌರ್ ಅವರ ಮೃತದೇಹವನ್ನು ಕುಟುಂಬದ ಸದಸ್ಯರು ಗುರುತಿಸಿದ್ದು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ಸಮರ್ಲಾ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.
ಮೃತ ಗಾಯಕಿಯ ಸಹೋದರ ಜೋತಿಂದರ್ ಸಿಂಗ್ ನೀಡಿರುವ ದೂರಿನ ಪ್ರಕಾರ, ಮೇ 13ರಂದು ರಾತ್ರಿ ಸುಮಾರು 8.30ಕ್ಕೆ ದಿನಸಿ ಸಾಮಗ್ರಿಗಳನ್ನು ತರಲು ಫೋರ್ಡ್ ಫಿಗೊ ಕಾರಿನಲ್ಲಿ ಮನೆಯಿಂದ ಹೊರಟಿದ್ದ ಇಂದರ್ ಕೌರ್ ಬಳಿಕ ಮನೆಗೆ ಮರಳಿರಲಿಲ್ಲ.
ಆಕೆಯ ಪತ್ತೆಗಾಗಿ ಕುಟುಂಬದವರು ಶೋಧ ಕಾರ್ಯಾಚರಣೆ ನಡೆಸಿದ ವೇಳೆ, ಬಲವಂತವಾಗಿ ವಿವಾಹವಾಗಲು ಯತ್ನಿಸುತ್ತಿದ್ದ ಭಲೂರ್ ನಿವಾಸಿ ಸುಖ್ವಿಂದರ್ ಸಿಂಗ್ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ವಿವಾಹ ಪ್ರಸ್ತಾವವನ್ನು ಇಂದರ್ ಕೌರ್ ನಿರಾಕರಿಸಿದ್ದರಿಂದ, ಆತ ಆಕೆಯ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಸುಖ್ವಿಂದರ್ ಸಿಂಗ್ ತನ್ನ ಸಹಚರನೊಂದಿಗೆ ಮಾರ್ಗಮಧ್ಯೆ ಇಂದರ್ ಕೌರ್ ಅವರನ್ನು ಅಡ್ಡಗಟ್ಟಿ, ಬಂದೂಕು ತೋರಿಸಿ ಅಪಹರಿಸಿದ್ದಾನೆ. ಬಳಿಕ ಹತ್ಯೆಗೈದು, ಮೃತದೇಹವನ್ನು ನೀಲೊ ನಾಲೆಗೆ ಎಸೆದು ಕೆನಡಾಗೆ ಪರಾರಿಯಾಗಿದ್ದಾನೆ ಎಂದು ಅವರು ದೂರಿದ್ದಾರೆ.
ಪ್ರಕರಣದ ತನಿಖೆಯಲ್ಲಿ ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿರುವ ಕುಟುಂಬದವರು, ಸುಖ್ವಿಂದರ್ ಸಿಂಗ್ ಹಾಗೂ ಆತನ ಸಹಚರ ಕರಂಜೀತ್ ಸಿಂಗ್ ವಿರುದ್ಧ ಮೇ 15ರಂದೇ ಎಫ್‌ಐಆರ್ ದಾಖಲಾಗಿದ್ದರೂ, ತಕ್ಷಣ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಮಾಲ್ಪುರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಬಲ್ಬೀರ್ ಸಿಂಗ್, ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಕ್ರಮ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

