ಕೋಲ್ಕತಾ: ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಜಹಾಂಗೀರ್ ಖಾನ್, ಮರುಮತದಾನಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವಾಗ ಮಂಗಳವಾರ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ.
ಫಾಲ್ಟಾದ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ, ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿರುವುದಾಗಿ ಖಾನ್ ಹೇಳಿದ್ದಾರೆ.
ಆದರೆ, ಜಹಾಂಗೀರ್ ಅವರ ನಿರ್ಧಾರವನ್ನು ಅಪಹಾಸ್ಯಗೈದಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಅವರಿಗೆ ಯಾವುದೇ ಮತಗಟ್ಟೆ ಏಜೆಂಟ್ಗಳು ಸಿಗದ ಕಾರಣ ಅವರು ರಣರಂಗದಿಂದ ಓಡಿಹೋಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಈ ಮಧ್ಯೆ, ಫಾಲ್ಟಾ ಕ್ಷೇತ್ರದಲ್ಲಿ ಪಕ್ಷದ 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಆದರೂ ಚುನಾವಣಾ ಆಯೋಗ ಎಂದಿನಂತೆ ಕಣ್ಣು ಮುಚ್ಚಿ ಕುಳಿತಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
''ಫಾಲ್ಟಾ ಮರುಮತದಾನದಿಂದ ಹಿಂದೆ ಸರಿಯುವ ಜಹಾಂಗೀರ್ ಖಾನ್ ಅವರ ನಿರ್ಧಾರವು ಅವರ ವೈಯಕ್ತಿಕ ನಿರ್ಧಾರವೇ ಹೊರತು ಪಕ್ಷದ್ದಲ್ಲ. ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾದಾಗಿನಿಂದ ಫಾಲ್ಟಾ ಕ್ಷೇತ್ರ ಒಂದರಲ್ಲೇ ನಮ್ಮ ಪಕ್ಷದ 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಪಕ್ಷದ ಹಲವಾರು ಕಚೇರಿಗಳನ್ನು ಧ್ವಂಸಗೊಳಿಸಲಾಗಿದೆ, ಮುಚ್ಚಿಸಲಾಗಿದೆ ಮತ್ತು ಬೆದರಿಕೆಯೊಡ್ಡಿ ಹಾಡಹಗಲೇ ಬಲವಂತವಾಗಿ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪದೇ ಪದೇ ದೂರು ನೀಡಿದರೂ ಚುನಾವಣಾ ಆಯೋಗ ಕಣ್ಣು ಮುಚ್ಚಿ ಕುಳಿತಿದೆ'' ಎಂದು ಪಕ್ಷ ಆರೋಪಿಸಿದೆ.
''ಇಂತಹ ಒತ್ತಡದ ನಡುವೆಯೂ ನಮ್ಮ ಕಾರ್ಯಕರ್ತರು ಬಂಡೆಯಂತೆ ಗಟ್ಟಿಯಾಗಿ ನಿಂತಿದ್ದಾರೆ. ತನಿಖಾ ಸಂಸ್ಥೆಗಳು ಮತ್ತು ಸರ್ಕಾರದ ಅಧಿಕಾರವನ್ನು ಬಳಸಿಕೊಂಡು ಬಿಜೆಪಿ ಒಡ್ಡಿರುವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಆದರೂ, ಕೆಲವರು ಕೊನೆಗೆ ಒತ್ತಡಕ್ಕೆ ಮಣಿದು ಕಣದಿಂದ ದೂರ ಸರಿಯಲು ನಿರ್ಧರಿಸಿದ್ದಾರೆ. ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಬಂಗಾಳ ವಿರೋಧಿ ಬಿಜೆಪಿಯ ವಿರುದ್ಧದ ನಮ್ಮ ಹೋರಾಟವು ಪಶ್ಚಿಮ ಬಂಗಾಳ ಮತ್ತು ದಿಲ್ಲಿಯಲ್ಲಿಯೂ ಮುಂದುವರಿಯುತ್ತದೆ'' ಎಂದು ಅದು ಹೇಳಿದೆ.

