ನವದೆಹಲಿ: ದೇಶದ ಸಶಸ್ತ್ರ ಪಡೆಗಳಿಗೆ ಸಾವಯವ ಪೂರಿತ ಆಹಾರ ಪೂರೈಕೆಗೆ ಕೇಂದ್ರ ಸರ್ಕಾರ (Central government) ಒತ್ತು ನೀಡಿದ್ದು, ಭಾರತ್ ಬ್ರ್ಯಾಂಡ್ ಪೌಷ್ಟಿಕ ಆಹಾರ, ಬಾಸ್ಮತಿ ಅಕ್ಕಿ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ.
ದೆಹಲಿಯ ಕೃಷಿ ಭವನದಲ್ಲಿ ಗುರುವಾರ, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಅವರು ಈ ಸಂಬಂಧ ಭಾರತೀಯ ಸೇನೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪೌಷ್ಟಿಕ ಆಹಾರ ಪೂರೈಕೆ ಬಗ್ಗೆ ಚರ್ಚಿಸಿದರು.ಸಶಸ್ತ್ರ ಪಡೆಗಳಿಗೆ ಗುಣಮಟ್ಟದ ಮತ್ತು ಸಾವಯವ ಪಡಿತರ ಆಹಾರ ಧಾನ್ಯ ಪೂರೈಸುವ ಬಗ್ಗೆ ಗಮನ ಹರಿಸಿದ ಸಚಿವರು, ಭಾರತ್ ಬ್ರ್ಯಾಂಡ್ ಅಕ್ಕಿ ಮತ್ತು ಗೋಧಿ ಉತ್ಪನ್ನ ಸರಬರಾಜು ವಿಸ್ತರಣೆಗೆ ಮಹತ್ವದ ಚರ್ಚೆ ನಡೆಸಿದರು.
ಅಕ್ಕಿ ಮತ್ತು ಗೋಧಿಯಂತಹ ಭಾರತ್ ಬ್ರ್ಯಾಂಡ್ ಉತ್ಪನ್ನಗಳ ವಿಸ್ತರಣೆ ಜತೆಗೆ ಉತ್ತಮ ಗುಣಮಟ್ಟದ ಬಾಸ್ಮತಿ ಅಕ್ಕಿ ಸಂಗ್ರಹಣೆ ಸೇರಿ ಸಶಸ್ತ್ರ ಪಡೆಗಳಿಗೆ ಅಗತ್ಯ ವಸ್ತುಗಳ ಖರೀದಿ ಕುರಿತು ಸಚಿವ ಜೋಶಿ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.
ಸಶಸ್ತ್ರ ಪಡೆಗಳಿಗೆ ಪರಿಣಾಮಕಾರಿಯಾಗಿ ಪೌಷ್ಟಿಕ ಆಹಾರ ಪೂರೈಕೆ ಮತ್ತು ಸಹಕಾರಿ ಸಂಸ್ಥೆಗಳ ಮೂಲಕ ಸ್ಕೇಲಿಂಗ್ ಸಂಗ್ರಹಣೆ ಕುರಿತು ಸಚಿವರು ಮತ್ತು ಅಧಿಕಾರಿಗಳು ಸಮಾಲೋಚನೆ ನಡೆಸಿದರು.
ಇದೇ ವೇಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರೈತರನ್ನು ಪ್ರೋತ್ಸಾಹಿಸುವಲ್ಲಿ ಮತ್ತು ಬೆಂಬಲಿಸುವಾಗ ಮತ್ತು ಸಶಸ್ತ್ರ ಪಡೆಗಳಿಗೆ ಉತ್ತಮ ಗುಣಮಟ್ಟದ, ಪೌಷ್ಟಿಕ ಆಹಾರ ಪೂರೈಕೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

