ಕೋಲ್ಕತ್ತ: ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೀವಂತ ಮದ್ದುಗುಂಡುಗಳನ್ನು ಸಾಗಿಸುತ್ತಿದ್ದ ಹಳೆಯ ಪ್ರಕರಣವೊಂದರಲ್ಲಿ ಟಿಎಂಸಿ ಪಕ್ಷದ ಕೌನ್ಸಿಲರ್ ಅಮೀರುಲ್ ಶೇಖ್ ಇಸ್ಲಾಂ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅಮೀರುಲ್ ಶೇಖ್ ಇಸ್ಲಾಂ ಅವರು ಬಡ್ಜ್ ಬಡ್ಜ್ ವಿಧಾನಸಭಾ ಕ್ಷೇತ್ರದಲ್ಲಿನ ಪುಜಲಿ ಪುರಸಭೆಯ ವಾರ್ಡ್ 14ರ ಕೌನ್ಸಿಲರ್ ಆಗಿದ್ದಾರೆ.
ಅವರನ್ನು ಮಂಗಳವಾರ(ಮೇ 5) ರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2025ರ ಸೆಪ್ಟಂಬರ್ 21ರಂದು ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ಅಮೀರುಲ್ ಶೇಖ್ ಅವರ ಲಗೇಜ್‌ನಲ್ಲಿ ಮದ್ದುಗುಂಡುಗಳು ಪತ್ತೆಯಾಗಿದ್ದವು. ಅವರು ಸರಿಯಾದ ದಾಖಲೆ ನೀಡುವಲ್ಲಿ ವಿಫಲರಾದ ಕಾರಣ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಲಗೇಜ್ ತಪಾಸಣೆ ವೇಳೆ ಅವರ ಬ್ಯಾಗ್‌ನಲ್ಲಿ ಆರು 7.65 ಎಂ.ಎಂ ಗುಂಡುಗಳು ಪತ್ತೆಯಾಗಿದ್ದವು. ಘಟನೆ ನಡೆದ ಬಳಿಕ ಪರವಾನಗಿ ಇರುವುದಾಗಿ ಆರೋಪಿಯು ವಾದಿಸಿದ್ದರು. ಹಾಗಾಗಿ, ಅದನ್ನು ಸಲ್ಲಿಸಲು ಅವರಿಗೆ ಕಾಲಾವಕಾಶ ನೀಡಲಾಗಿತ್ತು. ಆದರೆ, ಅವರು ವಿಫಲರಾದ ಕಾರಣ ಇದೀಗ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

